ಉಡುಪಿ, ಫೆ.27; ಮುರ್ಡೇಶ್ವರದಲ್ಲಿ ಸಾವನ್ನಪ್ಪಿದ ವಿದೇಶಿ ಪ್ರಜೆಯ ಅಂತ್ಯಸಂಸ್ಕಾರವನ್ನು ಇಂದ್ರಾಳಿಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ, ಮುರ್ಡೇಶ್ವರ ಪೋಲಿಸರು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಮಂಗಳವಾರ ಗೌರಯುತವಾಗಿ ನಡೆಸಿದರು. ಈ ಸಂದರ್ಭ ಮುರ್ಡೇಶ್ವರ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಎಸ್ ಆರ್, ಸಿಬ್ಬಂದಿಗಳಾದ ಮುರಳಿ ಎಂ ನಾಯ್ಕ್, ವಿಜಯ ನಾಯ್ಕ್, ಮಂಜು ಮಡಿವಾಳ ಉಪಸ್ಥಿತರಿದ್ದರು. ವಿಕಾಸ್ ಶೆಟ್ಟಿ, ಫ್ಲವರ್ ವಿಷ್ಣು ಸಹಕರಿಸಿದರು. ಎರಡು ವರ್ಷಗಳ ಹಿಂದೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಶ್ರೀಲಂಕಾ ಪ್ರಜೆಯ ಅಂತ್ಯಸಂಸ್ಕಾರವನ್ನು ಉಡುಪಿಯಲ್ಲಿ ನಡೆಸಿರುವುದನ್ನು ನೆನಪಿಸಿಕೊಂಡರು.
ಮೃತ ವಿದೇಶಿ ಪ್ರವಾಸಿಗ ರಷ್ಯಾ ದೇಶದ ಪ್ರಜೆ ಅಲೆಗ್ಸಾಂಡರ್ (73ವ) ಎಂದು ಗುರುತಿಸಲಾಗಿತ್ತು. ಪ್ರವಾಸಿಗ ಮುರ್ಡೇಶ್ವರದ ಕಡಲ ಕಿನಾರೆಯಲ್ಲಿ ವಿಹರಿಸುತ್ತಿರುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಫೆ. 22 ರಂದು ನಡೆದಿತ್ತು. ಶವವನ್ನು ಮಣಿಪಾಲದ ಶೀತಲೀಕೃತ ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ಬಳಿಕ ರಷ್ಯಾದದಲ್ಲಿದ್ದ ಮೃತರ ಕುಟುಂಬವರಿಗೆ ವಿಷಯ ಮುಟ್ಟಿಸಲಾಗಿತ್ತು. ಮೃತರ ಕುಟುಂಬಿಕರಿಗೆ ಭಾರತ ದೇಶಕ್ಕೆ ಬರಲು ಅಸಹಾಯಕತೆ ಎದುರಾಯಿತು. ಮೃತರ ಮಗಳು ಪೋಲಿಸ್ ಇಲಾಖೆಯಲ್ಲಿ ದಹನರೂಪದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ವಿನಂತಿಸಿಕೊಂಡಿದ್ದರು. ಪೋಲಿಸ್ ಇಲಾಖೆಯಿಂದ ಉನ್ನತಮಟ್ಟದ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ದಹನ ರೂಪದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಪೋಲಿಸರು ಗೌರಯುತವಾಗಿ ವಂದನೆ ಸಮರ್ಪಿಸಿದರು. ಮೃತರ ಮನೆ ಮಂದಿ ಅಂತ್ಯಸಂಸ್ಕಾರದ ದೃಶ್ಯಾವಳಿಗಳನ್ನು ವಿಡಿಯೋ ಕರೆಯ ಮೂಲಕ ವಿಕ್ಷಿಸಿಸಲು ವ್ಯವಸ್ಥೆ ಮಾಡಲಾಗಿತ್ತು. ಗೌರಯುತವಾಗಿ ನಡೆದ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ವಿಡಿಯೋ ಕರೆಯಲ್ಲಿ ಕಂಡು ಕಂಬನಿ ಮಿಡಿದರು.