ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ: ಸ್ತನ್ಯಪಾನ ಮಾಡಿಸದಿದ್ದರೆ ತಾಯಿ-ಮಗುವಿಗೆ ಸಮಸ್ಯೆ | ಡಾ. ಶರಣ ಬುಳ್ಳಾ ಹೇಳಿಕೆ

ಬೀದರ್: ಸ್ತನ್ಯಪಾನ ಮಾಡಿಸದಿದ್ದರೆ ತಾಯಿ ಹಾಗೂ ಮಗು ಇಬ್ಬರಿಗೂ ಸಮಸ್ಯೆ ಆಗುತ್ತದೆ ಎಂದು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಶರಣ ಬುಳ್ಳಾ ಹೇಳಿದರು.


ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಈಚೆಗೆ ಆಯೋಜಿಸಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ತಾಯಿ ಎದೆ ಹಾಲು ಕುಡಿಸದಿದ್ದರೆ ಮಗುವಿನ ಆರೋಗ್ಯಪೂರ್ಣ ಬೆಳವಣಿಗೆ ಆಗುವುದಿಲ್ಲ. ತಾಯಿಗೂ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.


ಕಿಮೋಥೆರಪಿ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು ಹೊರತುಪಡಿಸಿ, ಎಚ್.ಐ.ವಿ. ಪೀಡಿತರೂ ಸೇರಿದಂತೆ ಎಲ್ಲರೂ ಮಗುವಿಗೆ ಹಾಲುಣಿಸಬಹುದು ಎಂದು ಹೇಳಿದರು.
ತಾಯಿ ಹಾಲು ಎಲ್ಲ ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಜನಿಸಿದ ಒಂದು ಗಂಟೆಯೊಳಗೆ ಮಗುವಿಗೆ ಎದೆ ಹಾಲು ಉಣಿಸಬೇಕು. ಮೇಲಿನಿಂದ ಹಾಲು ಕೊಡಬಾರದು. ಮಗು ಎದೆ ಹಾಲು ಕುಡಿದಷ್ಟು ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ ಎಂದು ವಿವರಿಸಿದರು.


ಅಧ್ಯಕ್ಷತೆ ವಹಿಸಿದ್ದ ಡಾ. ವಿಜಯಶ್ರೀ ಬಶೆಟ್ಟಿ ಮಾತನಾಡಿ, ಮಗುವಿಗೆ ಕನಿಷ್ಠ ಆರು ತಿಂಗಳ ವರೆಗಾದರೂ ತಾಯಿ ಎದೆ ಹಾಲು ಕುಡಿಸಬೇಕು ಎಂದು ಸಲಹೆ ಮಾಡಿದರು.


ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ್ ಮಾತನಾಡಿ, ಸ್ತನ್ಯಪಾನದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ತನ್ಯಪಾನ ಮಾಡಿಸುವುದು ತಾಯಿ ಹಾಗೂ ಮಗುವಿಗೆ ಒಳ್ಳೆಯದು ಎಂದು ತಿಳಿಸಿದರು.


ಡಾ. ಶಾಂತಲಾ ಕೌಜಲಗಿ ಮಾತನಾಡಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಗೀತಾ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ಪ್ರಾಚಾರ್ಯ ಡಾ. ರಾಜೇಶ ಪಾರಾ, ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಲಿ, ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಉಮಾ ದೇಶಮುಖ, ಮಕ್ಕಳ ರೋಗ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಕೌಜಲಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಕಾರ್ಯದರ್ಶಿ ಪ್ರಭು ತಟಪಟ್ಟಿ, ಹಾವಶೆಟ್ಟಿ ಪಾಟೀಲ ವೀರಶೆಟ್ಟಿ ಮಣಗೆ, ಕಾಮಶೆಟ್ಟಿ ಚಿಕ್ಕಬಸೆ, ಜಯಶ್ರೀ ಪ್ರಭಾ, ಕವಿತಾ ಪ್ರಭಾ, ಡಾ. ರಿತೇಶ ಸುಲೆಗಾಂವ್, ಉಮಾ ಮಣಗೆ, ನೀಲಾಂಬಿಕೆ ಪಾಖಾಲ್, ಅನುರಾಧ ತಟಪಟ್ಟಿ, ಡಾ. ನಾಗೇಶ್ವರರಾವ್, ನಿತಿನ್ ಕರ್ಪೂರ, ವಿಕ್ರಮ ತಗಾರೆ ಮತ್ತಿತರರು ಇದ್ದರು.

Latest Indian news

Popular Stories