ಪಾಕ್‌ ಗೆ ಬನ್ನಿ ಆದರೆ; ಭಾರತಕ್ಕೆ ಹೊಸ ಆಫರ್‌ ನೀಡಿದ ಪಾಕಿಸ್ತಾನ

ಇಸ್ಲಮಾಬಾದ್/ಮುಂಬೈ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ (Champions Trophy) ಕೂಟ ಆಯೋಜನೆಗೆ ಪಾಕಿಸ್ತಾನ ತಲೆಕೆಡಿಸಿ ಕೂತಿದೆ. ಚಾಂಪಿಯನ್ಸ್‌ ಟ್ರೋಫಿ ಕೂಟವು ಪಾಕಿಸ್ತಾನದಲ್ಲಿ ನಡೆಯುವುದೆಂದು ನಿಗದಿಯಾಗಿದೆ. ಆದರೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣದಿಂದ ಕೂಟ ಆಯೋಜನೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ ಪಾಕಿಸ್ತಾನ. ಹಲವು ತಂತ್ರಗಳನ್ನು ಅನುಸರಿಸಿ ಭಾರತವನ್ನು ಕರೆಸಿಕೊಳ್ಳುವ ಪಾಕಿಸ್ತಾನದ ತಂತ್ರ ಫಲಿಸದ ಕಾರಣ ಇದೀಗ ಮತ್ತೊಂದು ತಂತ್ರದ ಮೊರೆ ಹೋಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ಹೊಸ ಯೋಜನೆಯೊಂದಿಗೆ ಬಿಸಿಸಿಐ ಯನ್ನು ಸಂಪರ್ಕಿಸಿದೆ. ಭದ್ರತಾ ಕಾರಣಗಳಿಂದಾಗಿ ಭಾರತ ತಂಡವು ಪಾಕಿಸ್ತಾನದಲ್ಲಿ ಉಳಿಯಲು ಸಿದ್ಧರಿಲ್ಲದಿದ್ದರೆ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳ ನಡುವೆ ಭಾರತವು ನವದೆಹಲಿ ಅಥವಾ ಚಂಡೀಗಢಕ್ಕೆ ಮರಳಲು ಅವಕಾಶ ನೀಡುವ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ. ಅಂದರೆ ಪ್ರತಿ ಪಂದ್ಯದ ಬಳಿಕ ಮರಳಿ ಭಾರತಕ್ಕೆ ಬರಬಹುದು ಎಂದು ಹೇಳಿದೆ.

ಭಾರತ ತಂಡವು ನವದೆಹಲಿ ಅಥವಾ ಚಂಡೀಗಢ/ಮೊಹಾಲಿಯಲ್ಲಿ ತಮ್ಮ ಕ್ಯಾಂಪ್ ಮಾಡಬಹುದು. ತಮ್ಮ ಪಂದ್ಯಗಳಿಗೆ ಲಾಹೋರ್‌ ಗೆ ಪ್ರಯಾಣಿಸಲು ಚಾರ್ಟರ್ಡ್ ಫ್ಲೈಟ್‌ ಗಳನ್ನು ಬಳಸಬಹುದು ಎಂದು ಬಿಸಿಸಿಐಗೆ ಪಿಸಿಬಿ ಮೌಖಿಕವಾಗಿ ಸೂಚಿಸಿದೆ. ಆದರೆ, ಭಾರತೀಯ ಮಂಡಳಿಗೆ ಲಿಖಿತವಾಗಿ ಯಾವುದೇ ಸಲಹೆಗಳನ್ನು ನೀಡಿಲ್ಲ ಎಂದು ಪಿಸಿಬಿ ಮೂಲವೊಂದು ಶುಕ್ರವಾರ ಪಿಟಿಐಗೆ ದೃಢಪಡಿಸಿದೆ.

“ಆದರೆ ಹೌದು, ಭಾರತವು ಪಾಕಿಸ್ತಾನದಲ್ಲಿ ತನ್ನ ಪಂದ್ಯಗಳನ್ನು ಆಡುವುದನ್ನು ಖಚಿತಪಡಿಸಿಕೊಳ್ಳಲು ಈ ಆಯ್ಕೆಗಳನ್ನು ಅಧಿಕಾರಿಗಳ ನಡುವೆ ಮೌಖಿಕವಾಗಿ ಚರ್ಚಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.

ಚಾಂಪಿಯನ್ಸ್ ಟ್ರೋಫಿ ಕೂಟವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಭಾರತದ ಗಡಿಯ ಸಾಮೀಪ್ಯದ ಕಾರಣದಿಂದ ಲಾಹೋರ್‌ ನಲ್ಲಿ ಭಾರತದ ಪಂದ್ಯಗಳನ್ನು ಯೋಜಿಸಿದೆ. ಪಂದ್ಯಾವಳಿಯಲ್ಲಿ ಭಾರತದ ಮೂರು ಗುಂಪು-ಹಂತದ ಪಂದ್ಯಗಳನ್ನು ಫೆಬ್ರವರಿ 20 (ಬಾಂಗ್ಲಾದೇಶ ವಿರುದ್ಧ), ಫೆಬ್ರವರಿ 23 (ಪಾಕಿಸ್ತಾನ ವಿರುದ್ಧ), ಮತ್ತು ಮಾರ್ಚ್ 2 (ನ್ಯೂಜಿಲೆಂಡ್ ವಿರುದ್ಧ) ರಂದು ನಿಗದಿಪಡಿಸಲಾಗಿದೆ.

Latest Indian news

Popular Stories