ಇಡಿ ದಾಳಿ ಬೆದರಿಕೆ ತಂತ್ರ, ಇದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯ ಹೆದರಲ್ಲ: ಡಿಕೆ ಸುರೇಶ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ಒಂದು ಬೆದರಿಕೆ ತಂತ್ರ. ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆದರುವುದಿಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಮೈಸೂರಿನ ಮುಡಾ ಕಚೇರಿ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಇಡಿ ದಾಳಿ ದುರುದ್ದೇಶ ಪೂರ್ವಕ. ಇದೊಂದು ರಾಜಕೀಯ ಪ್ರೇರಿತ ದಾಳಿ. ಕೇಂದ್ರ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ ಐಟಿ ಸಿಬಿಐ ಕೇಂದ್ರ ಸರ್ಕಾರದ ರಾಜಕೀಯ ಅಸ್ತ್ರಗಳಾಗಿವೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಮಾಜಿ ಸಂಸದ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಮುಕ್ತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಮುಡಾ ಕಚೇರಿಯಲ್ಲಿ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಕೆಂಗೇರಿ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Latest Indian news

Popular Stories