ಪೊಲೀಸರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಮರೆಯಬಾರದು – ಜಿಲ್ಲಾಧಿಕಾರಿ ವೆಂಕಟ್ ರಾಜಾ

ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಡಿವೈಎಸ್‍ಪಿಗಳ ಪರವಾಗಿ ಮೋಹನ್ ಕುಮಾರ್, ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ನಿರೀಕ್ಷಕರಾದ ಚೆನ್ನನಾಯಕ, ವೈಯರ್‍ಲೆಸ್ ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ಆನಂದ್, ಮಾಜಿ ಸೈನಿಕರ ಪರವಾಗಿ ಏರ್‍ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ನಿವೃತ್ತ ಡಿವೈಎಸ್‍ಪಿಗಳ ಪರವಾಗಿ ಬಿ.ಎಂ.ಕುಶಾಲಪ್ಪ, ಪೊಲೀಸ್ ನಿರೀಕ್ಷಕರ ಪರವಾಗಿ ಐ.ಪಿ.ಮೇದಪ್ಪ, ಬ್ಯಾಂಡ್ ಮಾಸ್ಟರ್ ಸಿದ್ದೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ವಕೀಲರ ಸಂಘದ ಪರವಾಗಿ ನಿರಂಜನ, ಕೊಡವ ಸಮಾಜಗಳ ಪರವಾಗಿ ಮುತ್ತಪ್ಪ, ಗೌಡ ಸಮಾಜಗಳ ಪರವಾಗಿ ಸೂರ್ತಲೆ ಸೋಮಣ್ಣ, ರೋಟರಿಗಳ ಪರವಾಗಿ ಸುಬ್ರಮಣಿ, ಲಯನ್ಸ್ ಪರವಾಗಿ ಅಂಬೆಕಲ್ಲು ನವೀನ್, ಸುದಯ್ ನಾಣಯ್ಯ ಇತರರು ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು 2023-24ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪೆÇಲೀಸ್ ಅಧಿಕಾರಿಗಳು ಮತ್ತು ಪೇದೆಗಳ ಹೆಸರು ಓದಿದರು. ಕರ್ನಾಟಕ ರಾಜ್ಯ ಐವರು ಸೇರಿದಂತೆ ಒಟ್ಟು ದೇಶದಲ್ಲಿ 216 ಮಂದಿ ಹುತಾತ್ಮರಾಗಿರುವ ಪೊಲೀಸರ ಹೆಸರನ್ನು ಓದಿದರು.
ಪೊಲೀಸ್ ಕವಾಯತು ಸಿಬ್ಬಂದಿಗಳು ಮೂರು ಸುತ್ತು ವಾಲಿ ಫೈರಿಂಗ್ ನಡೆಸಿದರು. ಈ ಸಂದರ್ಭದಲ್ಲಿ ಗಣ್ಯರು ಸೇರಿದಂತೆ ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು.

ಹುತಾತ್ಮರ ಸ್ಮರಣಾರ್ಥ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು. ಬಳಿಕ ರಿವಾಲಿ ಕವಾಯತು ಸಿಬ್ಬಂದಿಗಳು ವಂದಿಸಿದರು. ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು. ಸಿದ್ದೇಶ್ ತಂಡದವರು ವಾದ್ಯದೊಂದಿಗೆ ರಾಷ್ಟ್ರಗೀತೆ ನುಡಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪೊಲೀಸರ ಕರ್ತವ್ಯ ನಿಷ್ಠೆಯನ್ನು ಸದಾ ಸ್ಮರಿಸುವಂತಾಗಬೇಕು. ಸಮಾಜದ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಪೊಲೀಸರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಮರೆಯಬಾರದು ಎಂದು ಹೇಳಿದರು.

ಸಮಾಜದ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆ ಸ್ಮರಿಸುವಂತಾಗಬೇಕು ಎಂದು ಹೇಳಿದರು. ಪೊಲೀಸ್ ಮುಖ್ಯ ಕಾಬೀಲರಾದ ಎಂ.ಇ. ಫಾರೂಕ್ ಮತ್ತು ಎಂ.ಎಸ್.ಲೋಕೇಶ್ ಅವರು ನಿರೂಪಿಸಿ, ವಂದಿಸಿದರು.

ಮತ್ತಷ್ಟು ಮಾಹಿತಿ: 1959 ರ ಅಕ್ಟೋಬರ್, 21 ರಂದು ಭಾರತದ ಗಡಿ ಪ್ರದೇಶದಲ್ಲಿರುವ ಲಡಾಕ್ ಹಾಟ್ ಸ್ಪ್ರಿಂಗ್ಸ್ ಅಕ್ಷಯ್ ಚಿನ್ ಎಂಬ ಸ್ಥಳದಲ್ಲಿ ಸಿಆರ್‍ಪಿಎಫ್ ಪಡೆಯ ಕರಣ್ ಸಿಂಗ್, ಎಸ್.ಐ ಮತ್ತು ಸಿಬ್ಬಂದಿಗಳು ಗಡಿ ಭದ್ರತಾ ಕರ್ತವ್ಯದಲ್ಲಿರುವಾಗ ಚೀನಾ ಪಡೆ ದಾಳಿ ನಡೆಸಿತು.

ಈ ಸಂದರ್ಭದಲ್ಲಿ ಭಾರತೀಯ ವೀರ ಪೊಲೀಸರು ಎದೆಗುಂದದೆ ಜೀವದ ಹಂಗು ತೊರೆದು ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿದ್ದು, ಈ ಸಂದರ್ಭದಲ್ಲಿ 10 ಜನ ಪೊಲೀಸರು ವೀರ ಮರಣ ಹೊಂದಿರುತ್ತಾರೆ ಹಾಗೂ 09 ಜನ ಪೊಲೀಸರು ಗಾಯಗೊಂಡು ಸೆರೆಯಾಗಿರುತ್ತಾರೆ.

ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿ ವೀರ ಮರಣ ಹೊಂದಿದ ಪೊಲೀಸರ ಸಾವಿಗೆ ಇಡೀ ಭಾರತ ದೇಶದ ಜನತೆಯೇ ಶೋಕಿಸಿತು ಮತ್ತು ಹುತಾತ್ಮರಾದ ಪೊಲೀಸರ ನೆನಪಿಗಾಗಿ ಘಟನೆ ನಡೆದ ಸ್ಥಳದಲ್ಲಿ ಸಮುದ್ರ ಮಟ್ಟದಿಂದ ಸುಮಾರು 16 ಸಾವಿರ ಅಡಿ ಎತ್ತರದ ಒಂದು ಸ್ಮಾರಕವನ್ನು ಭಾರತ ಸರ್ಕಾರ ನಿರ್ಮಿಸಿದೆ.

Latest Indian news

Popular Stories