ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ

ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ರಾ.ಹೆ.66ರ ಪ್ರಮುಖ ಸರ್ಕಲ್ ನಲ್ಲಿ ಹೆಮ್ಮಾಡಿ ಖಾಸಗಿ ಪಿಯು ಕಾಲೇಜಿನ ಶಾಲಾ ವಾಹನವೊಂದು ಚಾಲಕನ‌ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಢಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೆ. 19ರ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಬ್ರಹ್ಮಾವರದಿಂದ ಹೆಮ್ಮಾಡಿ ಕಡೆಗೆ ಚಾಲಕ ಸಹಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದ ಶಾಲಾ ವಾಹನಕ್ಕೆ ದ್ವಿಚಕ್ರ ವಾಹನವೊಂದು ಏಕಾಏಕಿ ಅಡ್ಡಬಂದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಘಟನೆಯ ತೀವ್ರತೆಗೆ ವಾಹನ ಚಾಲಕನ ತಲೆ, ಕಣ್ಣು ಹಾಗೂ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೂ ಕೂಡಾ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯರು ತತ್‌ಕ್ಷಣವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎಂದು ವರದಿ ತಿಳಿಸಿದೆ.

Latest Indian news

Popular Stories