ಕಲಬುರಗಿ: ಪ್ಯಾಲೆಸ್ತೀನ್ ಧ್ವಜ (Palestine Flag) ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.
ರಾಜ್ಯದಲ್ಲಿ ಹಲವಡೆ ಪ್ಯಾಲೆಸ್ತೀನ್ ಧ್ವಜ ಹಾರಾಟ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ತೀನ್‌ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ‘ವಿ ಆರ್ ವಿತ್ ಪ್ಯಾಲೆಸ್ತೀನ್’ ಅಂದಿದೆ. ಕೇಂದ್ರ ಸರ್ಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದು ಮೆರವಣಿಗೆ ಮಾಡಿದ್ದು. ಧ್ವಜ ಹಿಡಿದಿದರೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದರು.
ಬೇರೆ ದೇಶದ ಪರ ಘೋಷಣೆ ಕೂಗಬಾರದು. ಘೋಷಣೆ ಕೂಗಿದರೆ ಅಂಥವರು ದೇಶದ್ರೋಹಿ ಕೆಲಸ ಮಾಡಿದಂತೆ ಆಗುತ್ತದೆ. ಘೋಷಣೆ ಕೂಗಿದವರು ಯಾರೇ ಇರಲಿ ಗಲ್ಲು ಶಿಕ್ಷೆಯಾಗಬೇಕು. ನಾನು ಮೊದಲು ಹಿಂದೂಸ್ತಾನಿ, ಆಮೇಲೆ ಕನ್ನಡಿಗ. ಅದಾದಮೇಲೆ ಮುಸ್ಲಿಂ. ಯಾರೇ ಆದರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು ಎಂದು ತಿಳಿಸಿದರು.
ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರದಲ್ಲಿ ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ. ಯಾರೇ ಬೆಂಕಿ ಹಚ್ಚುವ ಕೆಲಸ ಮಾಡಿದರೂ ಕ್ರಮಕೈಗೊಳ್ಳಬೇಕು. ರಾಜಕಾರಣಿಗಳು ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಜಾತಿ ಧರ್ಮ ಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಅವರು ಹೇಳಿದರು.
ಸಿಎಂ ರಾಜೀನಾಮೆ ನೀಡುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ವಿಜಯೇಂದ್ರರಂತಹ ನೂರು ಜನ ಬಂದರೂ ಏನೂ ಮಾಡಲು ಆಗಲ್ಲ. ಕುಮಾರಸ್ವಾಮಿ ಅವರಂಥ ಇನ್ನೂರು ಜನ ಬಂದರೂ ಏನೂ ಆಗಲ್ಲ. ಸಿದ್ದರಾಮಯ್ಯ ಹುಲಿ ಇದ್ದಂತೆ, ಅವರನ್ನು ಏನೂ ಮಾಡಲು ಆಗುವುದಿಲ್ಲ ಎಂದರು.