ಕಾಪು: ಮಜೂರು ಗ್ರಾ. ಪಂ. ವ್ಯಾಪ್ತಿಯ ಪಾದೂರು ಐಎಸ್‌ಪಿಆರ್‌ಎಲ್ ಯೋಜನಾ ಪ್ರದೇಶದೊಳಗೆ ನಿರ್ಮಿಸಲು ಉದ್ದೇಶಿಸಿರುವ ಪಾದೂರು ಜಲ್ಲಿ ಕ್ರಷರ್‌ಗೆ ಜಮೀನು ನೀಡುವ ಬಗ್ಗೆ ಜಂಟಿ ಸರ್ವೆಗೆ ಆಗಮಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ಬುಧವಾರ ಹಿಂದಕ್ಕೆ ಕಳಿಸಿದ್ದಾರೆ.
ಐಎಸ್‌ಪಿಆರ್‌ಎಲ್ ಯೋಜನಾ ಪ್ರದೇಶದೊಳಗೆ ಸಂಗ್ರಹಗೊಂಡಿರುವ ಬಂಡೆ ಕಲ್ಲುಗಳನ್ನು ತೆರವುಗೊಳಿಸುವುದಕ್ಕಾಗಿ ಯೋಜನಾ ಪ್ರದೇಶದೊಳಗೆ ಜಲ್ಲಿ ಕ್ರಷರ್ ನಿರ್ಮಾಣ ಮಾಡುವ ಬಗ್ಗೆ ಮಜೂರು ಗ್ರಾ.ಪಂ.ಗೆ ಮಾಹಿತಿ ಸಿಕ್ಕಿತ್ತು. ಇದನ್ನು ವಿರೋಧಿಸಿ ಮಜೂರು ಗ್ರಾ. ಪಂ. ಗ್ರಾಮಸ್ಥರನ್ನು ಸೇರಿಸಿಕೊಂಡು ಜನಾಭಿಪ್ರಾಯ ಸಭೆ ನಡೆಸಿದ್ದು, ಅಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಕ್ರಷರ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗ್ರಾಮಸ್ಥರ ಆಗ್ರಹ ಮತ್ತು ಗ್ರಾಮ ಪಂಚಾಯತ್ ತೆಗೆದುಕೊಂಡಿದ್ದ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಕ್ರಷರ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಇದನ್ನು ಸಭೆಗೆ ಆಗಮಿಸಿದ್ದ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಶ್ವಿನಿ ಅವರಿಗೂ ಮನವರಿಕೆ ಮಾಡಿಕೊಡಲಾಗಿತ್ತು.ಇದರ ನಡುವೆಯೂ ಬುಧವಾರ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಶ್ವಿನಿ ನೇತೃತ್ವದ ಅಧಿಕಾರಿಗಳ ತಂಡ ಏಕಾಏಕಿಯಾಗಿ ಐಎಸ್‌ಪಿಆರ್‌ಎಲ್ ಪರಿಸರದಲ್ಲಿ ಜಂಟಿ ಸರ್ವೆಗಾಗಿ ಬಂದಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ, ಜನಜಾಗೃತಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ನೇತೃತ್ವದ ತಂಡ ಸರ್ವೆಗೆ ವಿರೋಧ ವ್ಯಕ್ತಪಡಿಸಿ ಗ್ರಾ.ಪಂ. ಮಂಡಿಸಿದ್ದ ನಿರ್ಣಯದ ಪ್ರತಿಯನ್ನು ಅಧಿಕಾರಿಗಳಿಗೆ ನೀಡಿತು.
ಜಿಲ್ಲಾಧಿಕಾರಿಯವರ ಆದೇಶದಂತೆ ಸರ್ವೆಗೆ ಬಂದಿದ್ದು, ಜನರ ವಿರೋಧದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮರಳಿದ್ದಾರೆ.