ಕುಂದಾಪುರ, ಸೆ.19: ತಾಲೂಕಿನ ಕೋಟೇಶ್ವರದ ದೇವಸ್ಥಾನ ಕೆರೆಗೆ ಬಿದ್ದು ಎಂಬಿಬಿಎಸ್ ಮುಗಿಸಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಹಂಗಳೂರಿನ ಗೌರೀಶ್ ಬಿ.ಆರ್.(25) ಮೃತ ವಿದ್ಯಾರ್ಥಿ. ಎಂಬಿಬಿಎಸ್ ಮುಗಿಸಿದ್ದ ಅವರು ಉನ್ನತ ವಿದ್ಯಾಭ್ಯಾಸದ ಸಿದ್ಧತೆ ನಡೆಸುತ್ತಿದ್ದರು. ಬುಧವಾರ ಸಂಜೆ ಈಜುಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಿಂದ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಕೋಟೇಶ್ವರ ದೇವಸ್ಥಾನದ ಕೆರೆ ಸಮೀಪ ಬುಧವಾರ ತಡರಾತ್ರಿ ಅವರ ಬ್ಯಾಗ್, ಮೊಬೈಲ್ ಫೋನ್, ಚಪ್ಪಲಿ ಕಂಡು ಬಂದಿತ್ತು. ಸಂಜೆ 5:30ರಿಂದ ರಾತ್ರಿ 11 ಗಂಟೆಯ ನಡುವೆ ಕೆರೆಗೆ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಕೆರೆಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಮೃತ ಯುವಕನ ಸಹೋದರ ವಿಘ್ನೇಶ್ ಬಿ.ಆರ್. ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.