ಉಡುಪಿ: ಸೀತಾ ನದಿಯ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ:ಹಸಿರು ಪೀಠದಿಂದ ಎರಡು ಕೋಟಿ ದಂಡ!

ಉಡುಪಿ: ಲೋಕೋಪಯೋಗಿ ಇಲಾಖೆ ಉಡುಪಿ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಮತ್ತು ಉಡುಪಿಯ ಸಣ್ಣ ನೀರಾವರಿ ಇಲಾಖೆಯಿಂದ ಸೀತಾ ನದಿ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಉಂಟಾದ ಹಾನಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ದಕ್ಷಿಣ ಪೀಠವು 2 ಕೋಟಿಗೂ ಅಧಿಕ ದಂಡವನ್ನು ವಿಧಿಸಿದೆ.

ಈ ಪ್ರಕರಣವು ಕೋಡಿಕನ್ಯಾಣ ಗ್ರಾಮದಲ್ಲಿ ಪ್ರಸ್ತುತ ಇರುವ ಜೆಟ್ಟಿಯನ್ನು ವಿಸ್ತರಿಸುವ ಪ್ರಸ್ತಾವನೆಗೆ ಸಂಬಂಧಿಸಿದ್ದಾಗಿದ್ದು ಮತ್ತು ಯೋಜಕ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗುತ್ತಿಗೆದಾರನ ಮೂಲಕ ಹಂಗಾರಕಟ್ಟೆ ನದಿ ಬದಿಯಿಂದ ಹಿಡಿದು ಕೋಡಿಕನ್ಯಾನ ಜೆಟ್ಟಿಯವರೆಗೆ 3.12 ಕಿಮೀ ಹೂಳೆತ್ತುವ ಪ್ರಕ್ರಿಯೆ ಮಾಡಿರುವುದರ ಕುರಿತಾಗಿದೆ.

ಎನ್ಜಿಟಿಯಿಂದ ನೇಮಿಸಲ್ಪಟ್ಟ ಜಂಟಿ ಸಮಿತಿಯ ವರದಿಯಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಪರಿಸರ- ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್)ದ ಯಾವುದೇ ಅನುಮತಿ ಪಡೆಯದೆ ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಂಡಿರುವುದು ಸಾಬೀತಾಗಿದೆ. ಹೂಳೆತ್ತಿದ ಮರಳನ್ನು ಸಿಆರ್‌ಝಡ್ ಅಧಿಸೂಚನೆ, 2011 ರ ಉಲ್ಲಂಘನೆ ಮಾಡಿ ನದಿಯ ಪಶ್ಚಿಮ ಭಾಗದ ಮೂಲೆಯಲ್ಲಿ ಹಾಕಿ ಸುಮಾರು 5.9 ಎಕರೆ ನದಿ ಭಾಗದಲ್ಲಿ ಮುಚ್ಚಿ ಜಾಗ ಪುನರ್ ನಿರ್ಮಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯು ಉಬ್ಬರವಿಳಿತದ ಪರಿಣಾಮದಿಂದಾಗಿ ನದಿ ಬದಿಗೆ ಹಾನಿ ತಪ್ಪಿಸುವ ಕಾರಣ ನೀಡಿ ಹೂಳೆತ್ತಿದ ಮರಳನ್ನು ಮತ್ತು ವಸ್ತುಗಳನ್ನು ಬಳಸಿ ಕಟ್ಟೆ ಕಟ್ಟಿ ರಸ್ತೆಗಳನ್ನು ನಿರ್ಮಿಸಿದೆ.

ನದಿಯ ಈ ಪ್ರದೇಶವು ನೈಸರ್ಗಿಕ ಮ್ಯಾಂಗ್ರೋವ್‌ಗಳು ಮತ್ತು ಸಿಗಡಿ ಸಂತಾನೋತ್ಪತ್ತಿ ಆಗುವ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ನದಿಯಲ್ಲಿ ಹೂಳೆತ್ತಿದ ಮರಳನ್ನು ಹಾಕುವ ಸಮಯದಲ್ಲಿ ನೈಸರ್ಗಿಕ ಮ್ಯಾಂಗ್ರೋವ್‌ಗಳು ನಾಶಗೊಂಡಿರುವುದು ಕಂಡು ಬಂದಿದೆ. ಅಲ್ಲದೆ ಅಧಿಕಾರಿಗಳು CRZ ಅಧಿಸೂಚನೆ 2011 ರ ಉಲ್ಲಂಘನೆ ಮಾಡಿ ನದಿ ಹರಿವಿಗೆ ಹಾನಿಯನ್ನುಂಟು ಮಾಡಿದ್ದಾರೆ, ”ಎಂದು ಸಮಿತಿಯು ವರದಿಯನ್ನು ಸಲ್ಲಿಸಿದೆ.

ನದಿಯ ಹಾದಿಯನ್ನು ಬದಲಾಯಿಸುವುದು, ಮ್ಯಾಂಗ್ರೋವ್‌ಗಳು ಮತ್ತು ಮೀನುಗಳ ಸಂತಾನೋತ್ಪತ್ತಿ ಪ್ರದೇಶಗಳನ್ನು ಹಾನಿಗೊಳಿಸುವುದು ಮತ್ತು ಪ್ರದೇಶವನ್ನು ತೀವ್ರವಾದ ಪ್ರವಾಹಕ್ಕೆ ಕಾರಣವಾಗುವಂತಹ ಚಟುವಟಿಕೆಗಳನ್ನು ನೀರಾವರಿ ಇಲಾಖೆಯು ಮಾಡಿದೆ ಎಂದು ಆರೋಪಿಸಿ ವರದಿ ಸಲ್ಲಿಸಲಾಗಿತ್ತು.

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಈ ಸ್ಪಷ್ಟ ಉಲ್ಲಂಘನೆಗಳನ್ನು ಗಮನಿಸಿ, ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿತ್ತು.

ಲೋಕೋಪಯೋಗಿ ಇಲಾಖೆ- ಉಡುಪಿ, ಬಂದರು ಮತ್ತು ಮೀನುಗಾರಿಕಾ ಇಲಾಖೆ – ಉಡುಪಿ ಮತ್ತು ಉಡುಪಿಯ ಸಣ್ಣ ನೀರಾವರಿ ಇಲಾಖೆ ನಡೆಸಿರುವ ನಿಯಮ ಉಲ್ಲಂಘನೆಗಳು ವರದಿಯಿಂದ ಸಾಬೀತಾಗಿದ್ದು, ನದೀಮುಖ ಪರಿಸರ ಉಂಟಾದ ಹಾನಿಗೆ ಉಡುಪಿಯ ಇಲಾಖೆಗಳು ಕಾರಣರಾಗಿದ್ದು ದಂಡದ ಮೊತ್ತವನ್ನು ಪಾವತಿಸಲು ಈ ಎಲ್ಲ ಇಲಾಖೆಗಳು ಜಂಟಿಯಾಗಿ ಹೊಣೆಗಾರರಾಗಿರುತ್ತಾರೆ, “ಎಂದು ನ್ಯಾಯಪೀಠ ಹೇಳಿದೆ.

Latest Indian news

Popular Stories