ಶಾಸಕ ಪ್ರಭು ಚವ್ಹಾಣರಿಂದ ಸಂಗಮ್ ದೇವಸ್ಥಾನ ಸ್ವಚ್ಛತೆ*

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ಚಚ್ಛ ಮಂದಿರ ಅಭಿಯಾನದನ್ವಯ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶುಕ್ರವಾರ ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮದ ಸುಕ್ಷೇತ್ರ ಸಂಗಮೇಶ್ವರ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು.

ಲುಂಗಿ‌ಯನ್ನು ಧರಿಸಿ, ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಇಳಿದ ಶಾಸಕರು ನೀರಿನಿಂದ ಗರ್ಭಗುಡಿ ಸೇರಿದಂತೆ ದೇವಸ್ಥಾನದ ಆವರಣವೆಲ್ಲ ಸ್ವಚ್ಛಗೊಳಿಸಿದರು. ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಸಾಥ್ ನೀಡಿದರು. ದೇವಸ್ಥಾನದಲ್ಲಿ “ಜೈ ಶ್ರೀರಾಮ” ಎಂಬ ಜಯಘೋಷಗಳು ಕೇಳಿಸಿದವು.

ಬಳಿಕ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು, ಅಯೋಧ್ಯೆಯಲ್ಲಿ ರಾಮ ಮಂದಿರ‌ ನಿರ್ಮಾಣವಾಗಬೇಕೆಂಬುದು 500 ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಅನೇಕ ಹೋರಾಟಗಳಾಗಿವೆ. ಇಷ್ಟು ದಿನ ಕೇವಲ‌ ಭರವಸೆ ಮತ್ತು ಆಶ್ವಾಸನೆಗಳು ಮಾತ್ರ ಸಿಗುತ್ತಿದ್ದವು. ಮಂದಿರ ಮಾತ್ರ ನಿರ್ಮಾಣವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯಿಂದಾಗಿ ಇದು ಸಾಕಾರಗೊಂಡಿದೆ. ಅಯೋಧ್ಯೆಯಲ್ಲಿ ಸುಂದರ ಮತ್ತು ಭವ್ಯವಾದ ಮಂದಿರ ನಿರ್ಮಾಣಗೊಂಡಿದೆ. ಜನವರಿ 22ರಂದು ಪ್ರಧಾನಿಯವರ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಲಿದೆ ಎಂದರು.

ಶ್ರೀ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಪ್ರಧಾನಿಯವರು ಮಂದಿರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸಬೇಕು, ಪ್ರೇರಣೆ ನೀಡಬೇಕೆಂಬ ಉದ್ದೇಶದಿಂದ ಸುಕ್ಷೇತ್ರ ಸಂಗಮೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಅದರಂತೆ ಪಕ್ಷದ ಕಾರ್ಯಕರ್ತರು ತಮ್ಮ-ತಮ್ಮ ಗ್ರಾಮಗಳಲ್ಲಿನ ದೇವಸ್ಥಾನಗಳನ್ನು ಸ್ವಚ್ಛಗೊಳಿಸಬೇಕೆಂದು ಕರೆ ನೀಡಿದರು.

ನಾವೆಲ್ಲರೂ ಭಕ್ತಿಯಿಂದ ಪೂಜಿಸುವ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ‌‌ ದಿನ ನಮ್ಮೆಲರ ಪಾಲಿಗೆ ಸುದಿನ. ಈ ಸುಂದರ ಕ್ಷಣವನ್ನು ಅವಿಸ್ಮರಣೀಯವಾಗಿಸಲು ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಅದರಂತೆ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಪೂಜೆ, ಭಜನೆ, ಕೀರ್ತನೆ, ಹೋಮ-ಹವನ, ಪ್ರಸಾದ ವಿತರಣೆ ನಡೆಸಬೇಕು. ಸಂಜೆ ವೇಳೆ ಎಲ್ಲರ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ದೀಪಾವಳಿಯ ಮಾದರಿಯಲ್ಲಿ ಸಂಭ್ರಮಾಚರಣೆ ಮಾಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಔರಾದ ಎಪಿಎಂಸಿ ಅಧ್ಯಕ್ಷ ದೊಂಡಿಬಾ ನರೋಟೆ, ಮುಖಂಡರಾದ‌ ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಖಂಡೋಬಾ ಕಂಗಟೆ, ಶಿವಾಜಿರಾವ ಕಾಳೆ, ಗಿರೀಶ ವಡೆಯರ್, ಶಿವಕುಮಾರ ಪಾಂಚಾಳ, ಮಲ್ಲಿಕಾರ್ಜುನ ದಾನಾ, ಅಶೋಕ ಮೇತ್ರೆ, ಶಕುಂತಲಾ ಮುತ್ತಂಗೆ, ರವೀಂದ್ರ ರೆಡ್ಡಿ, ಬಂಟಿ ರಾಂಪೂರೆ, ವಿಷ್ಣು ರುದ್ನೂರೆ, ಕೇರಬಾ ಪವಾರ, ಭುಜಂಗರಾವ ಪಾಟೀಲ, ಇನಿಲ್ ಹೊಳಸಮುದ್ರ, ಜೈಪಾಲರೆಡ್ಡಿ, ಪ್ರವೀಣ ಕಾರಬಾರಿ, ಬಾಲಾಜಿ ಠಾಕೂರ್, ಅಶೋಕ ಅಲ್ಮಾಜೆ, ಧೂಳಪ್ಪ ಮುತ್ತಂಗೆ, ರಾಹುಲ್ ಪಾಟೀಲ, ದೀಪಕ ಸಜ್ಜನಶೆಟ್ಟಿ, ರಾಜಕುಮಾರ ಹಲಬರ್ಗೆ, ಓಂಕಾರ, ಸಂದೀಪ ಪಾಟೀಲ್ ಹಾಗೂ ಇತರರಿದ್ದರು.

Latest Indian news

Popular Stories