ವಕ್ಫ್ ತಿದ್ದುಪಡಿ ವಿಧೇಯಕ ಕುರಿತ ಚರ್ಚೆ ವೇಳೆ ಪ್ರತಿಪಕ್ಷಗಳಿಂದ ಜೆಪಿಸಿ ಮುಖ್ಯಸ್ಥರಿಗೆ ಬೆದರಿಕೆ: ತೇಜಸ್ವಿ ಸೂರ್ಯ ಆರೋಪ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ(JPC)ಯ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಕೆಲವು ವಿರೋಧ ಪಕ್ಷದ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಅಕ್ಟೋಬರ್ 14 ರಂದು ಕರ್ನಾಟಕದ ವಕ್ಫ್ ಭೂ ಹಗರಣದ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಅಭಿಪ್ರಾಯ ಪಡೆಯಲು ಸಮಿತಿ ಮುಂದೆ ಕರೆದಾಗ ವಿರೋಧ ಪಕ್ಷದ ಸದಸ್ಯರು ಅಸಂಸದೀಯವಾಗಿ ವರ್ತಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣದಿಂದ ಎರಡು ಬಾರಿ ಸಂಸದರಾಗಿರುವ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಸಂಸದೀಯ ಸಮಿತಿಯ ಸಭೆಯಲ್ಲಿ ಜಗದಾಂಬಿಕಾ ಪಾಲ್ ಅವರು “ಸಂಸದೀಯ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದ ಕೆಲವು ದಿನಗಳ ನಂತರ ಬಿಜೆಪಿ ನಾಯಕ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ತೇಜಸ್ವಿ ಸೂರ್ಯ ಅವರು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಸೂರ್ಯ, “ಮಾಣಿಪ್ಪಾಡಿ ಅವರು ತಮ್ಮ ಅಧಿಕಾರಾವಧಿಯಲ್ಲಿ 2012 ರಲ್ಲಿ ಸಲ್ಲಿಸಿದ ವರದಿ ಬಗ್ಗೆ ಮಾಹಿತಿ ನೀಡಿದರು. ಈ ವರದಿಯು ಕಾಂಗ್ರೆಸ್‌ನ ಕೆಲವು ನಾಯಕರನ್ನು ಒಳಗೊಂಡ ಖಾಸಗಿ ಸಂಸ್ಥೆಗಳಿಗೆ ಸುಮಾರು 2 ಲಕ್ಷ ಕೋಟಿ ರೂ. ಮೌಲ್ಯದ ಅಂದಾಜು 2,000 ಎಕರೆ ವಕ್ಫ್ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಅಥವಾ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದೆ.

ಈ ವಿಷಯವನ್ನು ಸಮಿತಿಯ ಗಮನಕ್ಕೆ ತಂದ ಕೂಡಲೇ ಪ್ರತಿಪಕ್ಷದ ಸದಸ್ಯರು ಸಭೆಗೆ ಅಡ್ಡಿಪಡಿಸಿದರು ಮತ್ತು ಸಾಕ್ಷಿ ಹಾಗೂ ಜೆಪಿಸಿ ಅಧ್ಯಕ್ಷರಿಗೆ ಮೌಖಿಕವಾಗಿ ಬೆದರಿಕೆ ಹಾಕಿದರು ಮತ್ತು ಸಮಿತಿಯ ದಾಖಲೆಗಳನ್ನು ಹರಿದು ಹಾಕಿದರು ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಪ್ರತಿಪಕ್ಷದ ಸದಸ್ಯರು, ಸಾಕ್ಷಿ ಮತ್ತು ಅಧ್ಯಕ್ಷರು ಕುಳಿತಿದ್ದ ಸ್ಥಳದ ಬಳಿ ತೆರಳಿ, ಇಬ್ಬರನ್ನು ಬೆದರಿಸಲು ಯತ್ನಿಸಿದರು. ಪೇಪರ್ ಗಳನ್ನು ಹರಿದು ಹಾಕಿದರು. ಪ್ರತಿಪಕ್ಷದ ಸದಸ್ಯರ ಈ ವರ್ತನೆಯು ಸಂಪೂರ್ಣ ಅಸಂಸದೀಯ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.

Latest Indian news

Popular Stories