ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಹಾಡು ಬಳಕೆ: ಕಾಂಗ್ರೆಸ್ ಟ್ವಿಟರ್ ಖಾತೆ ಬ್ಲಾಕ್ ಮಾಡುವಂತೆ ಕೋರ್ಟ್ ಆದೇಶ

ಬೆಂಗಳೂರು: ಅನುಮತಿ ಇಲ್ಲದೆ ಭಾರತ್ ಜೋಡೋಗೆ ಕೆಜಿಎಫ್-2 ಚಿತ್ರದ ಹಾಡು ಬಳಸಿದ್ದ ಕಾಂಗ್ರೆಸ್ ಗೆ ಈಗ ಸಂಕಷ್ಟು ಎದುರಾಗಿದ್ದು, ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(INC) ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಸೆಷನ್ಸ್ ಕೋರ್ಟ್ ಸೋಮವಾರ ಆದೇಶಿಸಿದೆ.

ಬ್ಲಾಕ್‌ಬಸ್ಟರ್ ಬಹುಭಾಷಾ ಚಿತ್ರ ಕೆಜಿಎಫ್-2 ರ ಸುಲ್ತಾನ್ ಹಾಡನ್ನು ಅನುಮತಿ ಇಲ್ಲದೆ ಬಳಸಿದ್ದಾರೆ ಎಂದು ಆರೋಪಿಸಿ ಎರಡು ದಿನಗಳ ಹಿಂದೆ ಬೆಂಗಳೂರು ಮೂಲದ ಎಂಆರ್ ಟಿ ಮ್ಯೂಸಿಕ್ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆ ದಾಖಲಿಸಿತ್ತು.

ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಯಾತ್ರೆಯ ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಚಿತ್ರದ ಜನಪ್ರಿಯ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಎಂಆರ್ ಟಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌ ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಯಾತ್ರೆಯ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಆದೇಶಿಸಿದೆ.

ಛಾಯಾಗ್ರಹಣ ಚಲನಚಿತ್ರಗಳು, ಹಾಡುಗಳು, ಸಂಗೀತ ಆಲ್ಬಂಗಳು ಇತ್ಯಾದಿಗಳನ್ನು ಸ್ವಾಧೀನಪಡಿಸಿಕೊಳ್ಳುವ ವ್ಯವಹಾರದಲ್ಲಿ ತೊಡಗಿರುವ ಉದ್ಯಮಗಳಿಗೆ ಸಮಸ್ಯೆಯಾಗಬಹುದು. ಅಲ್ಲದೇ ಇದು ಪೈರಸಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೋರ್ಟ್‌ ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದು, ಈಗ ತೆಲಂಗಾಣ ಯಾತ್ರೆ ನಡೆಯುತ್ತಿದೆ.

Latest Indian news

Popular Stories