ನೀರಿನ ತೊಟ್ಟಿಗೆ ಬಿದ್ದು ಮಹಿಳೆಯೋರ್ವಳು ಮೃತಪಟ್ಟ ಘಟನೆ ಪುತ್ತೂರಿನ ಒಳಮೊಗ್ರು ಗ್ರಾಮದ ಕೈಕಾರದಲ್ಲಿ ನಡೆದಿದೆ.
ಪುತ್ತೂರಿನ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ಪ್ರಕಾಶ್ಚಂದ್ರ ಕೈಕಾರ ಎಂಬವರ ಪತ್ನಿ ಶುಭಲಕ್ಷ್ಮಿ (50) ನೀರಿನ ತೊಟ್ಟಿಗೆ ಬಿದ್ದು ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಬುಧವಾರ ಮಧ್ಯಾಹ್ನ ಮನೆ ಸಮೀಪದ ನೀರಿನ ತೊಟ್ಟಿಯಲ್ಲಿ ಶುಭಲಕ್ಷ್ಮಿಯವರ ಮೃತದೇಹ ಪತ್ತೆಯಾಗಿದೆ. ಮನೆಯ ಗುಡ್ಡದ ಮೇಲೆ ಟರ್ಪಾಲ್ ನ ನೀರಿನ ತೊಟ್ಟಿಯಲ್ಲಿ ಘಟನೆ ನಡೆದಿದೆ.
ಬೆಳಗ್ಗೆ 11 ಗಂಟೆವರೆಗೆ ಪ್ರಕಾಶ್ಚಂದ್ರ ರೈ ಕೈಕಾರ ಅವರು ಮನೆಯಲ್ಲಿದ್ದು ಬಳಿಕ ಹೊರಗೆ ತೆರಳಿದ್ದರು. ಮಧ್ಯಾಹ್ನ 1.30ಗೆ ಮನೆಗೆ ಬಂದಾಗ ಮನೆಯಲ್ಲಿ ಪತ್ನಿ ಇರಲಿಲ್ಲ. ಹುಡುಕಾಟದ ವೇಳೆ ತೊಟ್ಟಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಕಾಲುಜಾರಿ ಪತ್ನಿ ನೀರಿನ ತೊಟ್ಟಿಗೆ ಬಿದ್ದಿದ್ದು, ಆ ಸಂದರ್ಭ ಯಾರೂ ಇಲ್ಲದ ಕಾರಣ ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪತಿ ಪ್ರಕಾಶ್ಚಂದ್ರ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.