ಬೆಂಗಳೂರು,ಸೆಪ್ಟೆಂಬರ್ 19: ಕಲಾವಿದರ ಮಾಸಾಶನ 3000 ರೂಪಾಯಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅಲ್ಲದೇ ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022, 2023, 2024ನೇ ಸಾಲಿನ ವಾರ್ಷಿಕ ನಾಟಕ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿ ಸಿದ್ದರಾಮಯ್ಯ ಅವರು,ನಮ್ಮ ಸರ್ಕಾರ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ರಂಗಭೂಮಿಯನ್ನು ಬೆಂಬಲಿಸಿಕೊಂಡು ಬಂದಿದೆ. ನಾವು ಅಕಾಡೆಮಿಗಳಿಗೆ ಕೊಡುತ್ತಿದ್ದ ಅನುದಾನದ ಮೊತ್ತವನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಾವು ಅದನ್ನು ಮತ್ತೆ ಹೆಚ್ಚಿಸಿದ್ದೇವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೇಡಿಕೆಯಂತೆ ಅಕಾಡೆಮಿಗಳ ಮೊತ್ತವನ್ನು ಹೆಚ್ಚಿಸುವ ಜೊತೆಗೆ ಕಲಾವಿದರ ಮಾಸಾಶನವನ್ನು 2500 ರೂಗಳಿಂದ 3000 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಬಿಜೆಪಿ ಸರ್ಕಾರ ಕಲೆ ಸಂಸ್ಕೃತಿಗೆ ದ್ರೋಹ ಬಗೆದು ಪ್ರಶಸ್ತಿ ವಿತರಣೆ ನಿಲ್ಲಿಸಿತ್ತು. ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ನೀಡಬೇಕು ಎಂದು ಸಿಎಂ ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ, ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಡಾ.ಉಮಾಶ್ರೀ, ಪ್ರೊ.ಎಚ್.ಎಸ್.ಶಿವಪ್ರಕಾಶ್, ಕೋಟಿಗಾನಲ್ಲಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಧರಣೀದೇವಿ ಮಾಲಗತ್ತಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.