ಸರ್ಕಾರದ ವಿರುದ್ಧ ಬೆಂಗಳೂರಿನ ಜನ ದಂಗೆ ಏಳುವ ಮುನ್ನ ರಸ್ತೆ ಗುಂಡಿಗಳನ್ನು ಮುಚ್ಚಿ : ಆರ್‌.ಅಶೋಕ್‌

ಬೆಂಗಳೂರು,ಅ.18- ಬೆಂಗಳೂರಿನ ಜನತೆ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು-ನೋವು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು.

ಬೆಂಗಳೂರು ನಗರಕ್ಕೆ 25,000 ಕೋಟಿ ವಿಶೇಷ ಅನುದಾನ ನೀಡಿ, ರಸ್ತೆಗಳು, ರಾಜಕಾಲುವೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಎಕ್ಸ್ ನಲ್ಲಿ ಟ್ವೀಟ್‌ ಮಾಡಿರುವ ಅವರು, ಬಯಲಾಯ್ತು ಬ್ರ್ಯಾಂಡ್‌ ಬೆಂಗಳೂರಿನ ಮುಖವಾಡ, ಬೀದಿಗೆ ಬಂತು ಕಾಂಗ್ರೆಸ್‌‍ ಸರ್ಕಾರದ ಬಂಡವಾಳ. ಇಷ್ಟಕ್ಕೂ ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್‌‍ ಪಕ್ಷ ಏನು ಮಾಡಿದೆ ಕಾಂಗ್ರೆಸ್‌‍ ಸರ್ಕಾರ ಕಳೆದ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ಸಹ ನೀಡಿಲ್ಲ ಎಂದು ಕಿಡಿಕಾರಿದರು.

ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್‌‍ ಸರ್ಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ. 40% ಕಮಿಷನ್‌ ಸರ್ಕಾರ ಎಂದು ಸುಳ್ಳು, ಅಪಪ್ರಚಾರದ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಪಕ್ಷ, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನು ಬಲಿ ಕೊಡುತ್ತಿದೆ ಎಂದು ದೂರಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ, ರಾಜಧಾನಿಯ ರಸ್ತೆಗಳು ಕೆರೆಗಳಾಗಿವೆ, ಬಡಾವಣೆಗಳು ಜಲಾವೃತವಾಗಿವೆ. ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ಲೂಟಿ ಹೊಡೆದು, ಸಿಲಿಕಾನ್‌ ಸಿಟಿ ಜನರನ್ನು ಮಳೆ ನೀರಲ್ಲಿ ಮುಳುಗಿಸಿ, ಬೆಂಗಳೂರಿನ ಮರ್ಯಾದೆ ಹರಾಜು ಹಾಕಿದ್ದೀರಲ್ಲ, ಇದೇನಾ ತಾವುಗಳು ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣ ಮಾಡುವ ಪರಿ? ಎಂದು ಪ್ರಶ್ನಿಸಿದ್ದಾರೆ.

Latest Indian news

Popular Stories