ರೈತರಿಂದ ಹಾಲು ಖರೀದಿ ಲೀಟರ್‌ಗೆ ₹5 ಹೆಚ್ಚಳ: ಜನವರಿಯಿಂದ ಪರಿಷ್ಕೃತ ದರ ಜಾರಿ

ಮೈಸೂರು: ‘ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಲೀಟರ್‌ ಹಾಲಿಗೆ ₹ 5 ಹೆಚ್ಚಿಸಲು ಚಿಂತನೆ ನಡೆದಿದ್ದು, ಜನವರಿಯಿಂದ ಜಾರಿಗೊಳಿಸಲಾಗುವುದು’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ‘ಮೈಮುಲ್‌’ನಿಂದ ₹1.15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಒಕ್ಕೂಟದ ಉಪ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಲೀಟರ್‌ ಹಾಲಿಗೆ ಈಗ ₹33 ಕೊಡಲಾಗುತ್ತಿದೆ. ಹಿಂದೆ ಅದು ₹35 ಇತ್ತು. ಈಗ, ₹5 ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕವಾಗಿ ಒಪ್ಪಿದ್ದಾರೆ. ಅವರ ಸೂಚನೆಯಂತೆ ಹೊಸ ವರ್ಷದ ಕೊಡುಗೆಯಾಗಿ ಇದನ್ನು ನೀಡಲಿದ್ದೇವೆ. ಆ ₹ 5 ಪೂರ್ಣವಾಗಿ ರೈತರಿಗೇ ದೊರೆಯುವಂತೆಯೇ, ಬೇರೆಯವರಿಗೆ ಹಂಚಿಕೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳು ಅನಗತ್ಯ ಖರ್ಚುಗಳನ್ನು ನಿಲ್ಲಿಸಿದರೆ, ರೈತರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಬಹುದಾಗಿದೆ. ಪಶುಆಹಾರಕ್ಕೆ (ಫೀಡ್ಸ್‌) ಸಹಾಯಧನ ಕೊಡುವಂತೆ ಹೈನುಗಾರರು ಕೇಳುತ್ತಿರುತ್ತಾರೆ. ಇದೆಲ್ಲವನ್ನೂ ಕೊಡಲು ಅನವಶ್ಯ ವೆಚ್ಚಗಳನ್ನು ನಿಲ್ಲಿಸಬೇಕು. ಒಕ್ಕೂಟಗಳಲ್ಲಿನ ನಷ್ಟ ಭರಿಸಿಕೊಳ್ಳಲು ರೈತರಿಗೆ ಅನ್ಯಾಯ ಮಾಡಬಾರದು. ಶೇ 1ರಿಂದ 2ರಷ್ಟು ಲಾಭ ಬಂದರೆ ಸಾಕು. ಬಹಳ ಲಾಭದ ಉದ್ದೇಶವನ್ನು ಇಟ್ಟುಕೊಳ್ಳಬಾರದು. ರೈತರಿಗೆ ನೆರವಾಗುವ ಉದ್ದೇಶವೇ ಒಕ್ಕೂಟಗಳಿಗೆ ಮುಖ್ಯವಾಗಬೇಕು’ ಎಂದು ತಿಳಿಸಿದರು.

ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹಣ ಎಲ್ಲಿಂದ ಬರುತ್ತದೆ? ಸರ್ಕಾರವೂ ಕಷ್ಟದಲ್ಲಿದೆ’ ಎಂದರು.

‘ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನಕ್ಕಾಗಿ ಈ ವರ್ಷ ₹ 1,300 ಕೋಟಿ ಇಟ್ಟಿದ್ದೇವೆ. ಅದರಲ್ಲಿ ಈಗಾಗಲೇ ₹ 800 ಕೋಟಿ ಬಿಡುಗಡೆ ಮಾಡಿದ್ದೇವೆ. ಹೋದ ವರ್ಷ ₹ 1,200 ಕೋಟಿ ಇಟ್ಟಿದ್ದೆವು; ಅಷ್ಟನ್ನೂ ಬಿಡುಗಡೆ ಮಾಡಿದೆವು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ₹ 700 ಕೋಟಿ ಬಾಕಿ ಉಳಿಸಿದ್ದೇ ಪ್ರೋತ್ಸಾಹಧನ ಬಾಕಿಗೆ ಕಾರಣವಾಗಿದೆ.

ನಮ್ಮ ಸರ್ಕಾರ ಬಂದ ಮೇಲೆ ಅದರಲ್ಲಿ ₹ 300 ಕೋಟಿ ಕೊಟ್ಟಿದ್ದೇವೆ. ರೈತರಿಗೆ ಕೊಡಬೇಕಾದ ₹ 400 ಕೋಟಿ ಹಳೆಯ ಬಾಕಿ ಇನ್ನೂ ಇದೆ. ಇದನ್ನು ಬೇಗ ಬಿಡುಗಡೆ ಮಾಡಿಸಿಕೊಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದೇನೆ. ಮಾರ್ಚ್‌ ಅಂತ್ಯದೊಳಗೆ ಆ ಬಾಕಿಯನ್ನೆಲ್ಲಾ ತೀರಿಸಲಾಗುವುದು’ ಎಂದು ಮಾಹಿತಿ ನೀಡಿದರು.

Latest Indian news

Popular Stories