ಬಿಜೆಪಿ 200 ಸ್ಥಾನವನ್ನೂ ಗೆಲ್ಲುವುದಿಲ್ಲ: ಡಿಕೆಶಿ ಭವಿಷ್ಯ

ಮೈಸೂರು: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ನಾಮಪತ್ರ ಸಲ್ಲಿಕೆ ನಂತರ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆ. ಈ ಮಾತನ್ನು ಆಮ್‌ ಆದ್ಮಿ ಪಕ್ಷದವರು ಹಾಗೂ ಕಮ್ಯುನಿಷ್ಟ್ ಪಕ್ಷದವರೇ ಹೇಳುತ್ತಿದ್ದಾರೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಎಎಪಿ ಹಾಗೂ ಕಮ್ಯುನಿಷ್ಟ್ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಗಟ್ಟೆ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಬೇಕು’ ಎಂದು ತಿಳಿಸಿದರು.

‘ಚಾಮರಾಜನಗರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಬೆಂಬಲಿಗರು, ನೆಂಟರು ನನ್ನನ್ನು ಭೇಟಿಯಾಗಿ, ‘ನಮಗೆ ಬಿಜೆಪಿಯಲ್ಲಿ ಇರಲು ಆಗುವುದಿಲ್ಲ’ ಎಂದು ಹೇಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.

‘ಅಮಿತ್ ಶಾ ಅವರೇ ನಿಮ್ಮಲ್ಲಿ ಇರುವಷ್ಟು ಭಿನ್ನಾಬಿಪ್ರಾಯ, ಕಿತ್ತಾಟ ನಮ್ಮಲ್ಲಿ ಇಲ್ಲ. ಅಧಿಕಾರಕ್ಕಾಗಿ ಶಿವಕುಮಾರ್‌ ಕಾಯುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ. ಆದರೆ, ನಾನು ಮತ್ತು ಸಿದ್ದರಾಮಯ್ಯ ಒಗ್ಗಟ್ಟಾಗಿದ್ದೇವೆ. ಇಡೀ ಸಚಿವ ಸಂಪುಟ ಒಗ್ಗಟ್ಟಾಗಿದೆ. ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ. ಅಧಿಕಾರಕ್ಕೆ ನಾನು ಕಾದಿರುವೆ ಎಂಬುದು ನಿಮ್ಮ ಭ್ರಮೆ’ ಎಂದು ಕೇಂದ್ರ ಗೃಹ ಸಚಿವರಿಗೆ ತಿರುಗೇಟು ನೀಡಿದರು.

Latest Indian news

Popular Stories