Jammu Kashmir: 10 ವರ್ಷದ ಬಳಿಕ ಕಾಶ್ಮೀರದಲ್ಲಿ ಇಂದು ಮೊದಲ ಹಂತದ ಮತದಾನ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ 10 ವರ್ಷಗಳ ಬಳಿಕ ಬುಧವಾರ ಅಲ್ಲಿನ ವಿಧಾನಸಭೆಗೆ ಮೊದಲ ಬಾರಿಗೆ ಮತದಾನ ನಡೆಯಲಿದೆ.

90 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ಒಟ್ಟು 24 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜಮ್ಮು ವಲಯದ 3 ಜಿಲ್ಲೆಗಳಲ್ಲಿನ 8, ಕಾಶ್ಮೀರ ವಲಯದ 4 ಜಿಲ್ಲೆಗಳ 16 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 90 ಪಕ್ಷೇತರರೂ ಸೇರಿ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷ ಮತದಾರರು ನಿರ್ಧರಿ­ಸಲಿದ್ದಾರೆ. ಈ ಪೈಕಿ 18ರಿಂದ 19 ವರ್ಷ ವಯೋಮಿತಿಯ 1.23 ಲಕ್ಷ ಮಂದಿ ಮತದಾರರಿದ್ದಾರೆ.

ಕಾಶ್ಮೀರ ವಲಯದಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಮಾಜಿ ಸಿಎಂ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ, ಜಮ್ಮು ವಲಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹೋರಾಟ ಏರ್ಪಟ್ಟಿದೆ. ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ನಡುವೆ ಚುನಾವಣ ಮೈತ್ರಿ ಇದ್ದರೂ ಬನಿಹಾಲ್‌, ಭದ್ರೇವಾಹ್‌ ಮತ್ತು ದೋಡಾಗಳಲ್ಲಿ 2 ಪಕ್ಷಗಳೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಅರೆ ಸೇನಾ ಪಡೆ ಸೇರಿ ಬಹುಸ್ತರದ ಭದ್ರತೆ ಕಲ್ಪಿಸಲಾಗಿದೆ.ಪಿಡಿ ಪಿಯ ಇಲ್ತಿಜಾ ಮುಫ್ತಿ, ಸಿಪಿಎಂನ ಮೊಹಮ್ಮದ್‌ ಯೂಸುಫ್ ತಾರಿಗಾಮಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಗುಲಾಂ ಅಹ್ಮದ್‌ ಮಿರ್‌, ನ್ಯಾಶನಲ್‌ ಕಾನ್ಫರೆನ್ಸ್‌ನ ಸಕೀನಾ ಇಟೂ, ಬಿಜೆಪಿಯ ದಲೀಪ್‌ ಸಿಂಗ್‌ ಪರಿಹಾರ್‌, 2018ರ ನವೆಂಬರ್‌ನಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಅಜಿತ್‌ ಪರಿಹಾರ್‌ ಮತ್ತು ಅವರ ಸೋದರ ಸಂಬಂಧಿ ಅನಿಲ್‌ ಪರಿಹಾರ್‌ ಕುಟುಂಬದ ಶಗುನ್‌ ಪರಿಹಾರ್‌ ಚುನಾವಣ ಕಣದಲ್ಲಿರುವ ಪ್ರಮುಖರು.  ಸೆ.25ರಂದು 2ನೇ ಹಂತ, ಅ.1ರಂದು 3ನೇ ಹಂತದ ಮತದಾನ ನಡೆಯಲಿದೆ. ಅ.8ರಂದು ಫ‌ಲಿತಾಂಶ ಪ್ರಕಟವಾಗಲಿದೆ.

Latest Indian news

Popular Stories