“ರಾಜ್ಯ ಸರಕಾರದ ಅನುದಾನ ಬರುತ್ತಿಲ್ಲ, ಕೇಂದ್ರ ಸರಕಾರದ ಅನುದಾನ ಬರುತ್ತಿಲ್ಲ” – ಗೋಳು ಕೇಳಿ ಹೈರಾಣದ ಕರಾವಳಿ ಜನತೆ!

ಚುನಾವಣೆ ಸಮೀಪ ಬಂದ ತಕ್ಷಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳು ಅಭಿವೃದ್ಧಿ ಕನಸನ್ನು ಮುಂದಿಟ್ಟು ಜನರ ಬಳಿ ಮತ ಕೇಳುತ್ತಾರೆ. ಆ ಸಂದರ್ಭದಲ್ಲಿ ಬಿಜೆಪಿ ಸರಕಾರ ಅಥವಾ ಕಾಂಗ್ರೆಸ್ ಸರಕಾರ ಬಂದರೇ ಮಾತ್ರ ಅಭಿವೃದ್ಧಿ ಮಾಡುತ್ತೇವೆ ಎನ್ನುವುದಿಲ್ಲ. ನನ್ನನ್ನು ಗೆಲ್ಲಿಸಿ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ. ಈ ಮುಂಚೆಯಾಗದ ಅಭಿವೃದ್ಧಿ ನೀವು ಕಾಣಲು ಸಾಧ್ಯವಾಗುತ್ತದೆ ಎಂಬ ಆಶ್ವಾಸನೆಗಳ ಸುರಿಮಳೆಗೈಯುತ್ತಾರೆ.

ಉಡುಪಿ ಜಿಲ್ಲೆಯ ಐದು ಶಾಸಕರು ಬಿಜೆಪಿ ಪಕ್ಷದಿಂದ ಆಯ್ಕೆಯಾದವರು. ಇದೀಗ ರಾಜ್ಯ ಕಾಂಗ್ರೆಸ್ ಸರಕಾರದಿಂದ ಅನುದಾನ ಸಿಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿ ಸುದ್ದಿಯಲ್ಲಿದ್ದಾರೆ. ಈತನ್ಮಧ್ಯೆ ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ ಎನ್ನುವ ಇವರು ಕೇಂದ್ರ ಸರಕಾರದ ಅನುದಾನದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿರುವುದು ಯಾಕೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮುಖಂಡರು ಮುಂದಿಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬಹುತೇಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದೆ. ಶಾಸಕರು, ಸಂಸದರು ಭಾವನಾತ್ಮಕ ವಿಚಾರಗಳಿಗೆ ನೀಡುವ ಕಾಳಜಿ ಅಭಿವೃದ್ಧಿ ಕಾರ್ಯದಲ್ಲಿ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಉಡುಪಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಸಮರ್ಪಕವಾಗಿ ವಾದ ಮಂಡಿಸಿ ಜಿಲ್ಲೆಗೆ ಅನುದಾನ ತರುವಲ್ಲಿ ಶಾಸಕರು ವಿಫಲವಾಗುತ್ತಿದ್ದಾರೆ ಎಂಬ ಅಪವಾದವೂ ಇದೆ. ಈತನ್ಮಧ್ಯೆ ಕೇಂದ್ರ ಸರಕಾರ ಬಿಜೆಪಿಯದ್ದೇ ಇದ್ದರೂ ಸಂಸದರು ಕಳೆದ ಹಲವು ಸಮಯದಿಂದ ಆಮೆಗಾತಿಯಲ್ಲಿ ಸಾಗುತ್ತಿರುವ ಕೆಲವು ಕಡೆ ಸ್ಥಗಿತಗೊಂಡಿರುವ ಕಾಮಗಾರಿಗಳ ಕುರಿತು ಕೇವಲ ಹೇಳಿಕೆ ನೀಡುತ್ತಿದ್ದಾರೆ‌ ವಿನಹ ಕೆಲಸ ಮಾತ್ರ ಆಗುತ್ತಿಲ್ಲ!.

ಪ್ರತಿನಿತ್ಯ ಸ್ಥಳೀಯ ರಸ್ತೆಗಳ ಹದೆಗೆಟ್ಟ ಸ್ಥಿತಿಯ ಕುರಿತು ಮಾಧ್ಯಮಗಳು ವರದಿ ಮಾಡುತ್ತಿವೆ. ಮಳೆಗಾಲದ ಮುನ್ನ ಡಾಂಬರೀಕರಣಗೊಂಡ ರಸ್ತೆಗಳು ಕೂಡ ಮಳೆಗೆ ಕಿತ್ತು ಹೋಗಿ ಭಾರೀ ಗಾತ್ರದ ಹೊಂಡಗಳು ಬಿದ್ದಿದೆ. ಪರಿಶೀಲನೆಯ ನೆಪದಲ್ಲಿ ಜನಪ್ರತಿನಿಧಿಗಳು ದಿನದೂಡುತ್ತಿದ್ದಾರೆ ಬಿಟ್ಟರೆ ಕಾಮಗಾರಿಗೆ ವೇಗ ಸಿಗುತ್ತಿಲ್ಲ.

ಶಾಸಕರು, ಉಸ್ತುವಾರಿ ಸಚಿವರು ಕಡಲ್ಕೋರೆತದ ಸಂದರ್ಭದಲ್ಲಿ ಭೇಟಿ ನೀಡಿದ ಪ್ರದೇಶಗಳಲ್ಲಿ ಇನ್ನು ಕೂಡ ಒಂದೇ ಒಂದು ಕಲ್ಲು ಬಂದಿಲ್ಲ. ಶಾಶ್ವತ ಪರಿಹಾರ ಬಿಡಿ ತಾತ್ಕಾಲಿಕ ಕಾಮಗಾರಿಗೂ ಚಾಲನೆ ನೀಡದೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ. ಇನ್ನು ಮುಂದಿನ ಮಳೆಗಾಲದಲ್ಲಿ ಕಡಲ್ಕೋರೆತ ಆರಂಭವಾದಾಗ ಇದೇ ಪರಿಶೀಲನೆಯ ಪ್ರಹಸನ ಮುಂದುವರಿಯಲಿದೆ.

ಅಂಬಾಗಿಲು-ಮಣಿಪಾಲ ರಸ್ತೆ, ಸಂತೆಕಟ್ಟೆ-ಕೆಮ್ಮಣ್ಣು ರಸ್ತೆ, ಬ್ರಹ್ಮಗಿರಿ ಮುಖ್ಯ ರಸ್ತೆ, ಗ್ರಾಮೀಣ ಪ್ರದೇಶದ ರಸ್ತೆಗಳು ಸೇರಿದಂತೆ ಉಡುಪಿ ಕ್ಷೇತ್ರದ ಬಹುತೇಕ ರಸ್ತೆಗಳು ಹೊಂಡಮಯವಾಗಿದ್ದು ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿದೆ ಆದರೆ ಅಭಿವೃದ್ಧಿ ಕಾರ್ಯಗಳ ಅನುದಾನ ತಡೆ ಹಿಡಿದಿದೆ ಎಂಬುವುದು ಬಿಜೆಪಿಗರ ಅಳಲು. ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ನೀಡಬೇಕಾದ ದೊಡ್ಡ ಪಾಲು ಅನುದಾನ ತಡೆ ಹಿಡಿದಿದೆ ಆ ಕಾರಣಕ್ಕಾಗಿ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗುತ್ತಿದೆ ಎನ್ನುವುದು ಕಾಂಗ್ರೆಸ್ಸಿಗರ ಮಾತು. ಒಟ್ಟಿನಲ್ಲಿ ಜನಪ್ರತಿನಿಧಿಗಳ ಸಾಬೂಬು ಕೇಳಿ ಜನ ಸಾಮಾನ್ಯರು ಹೈರಣಾಗಿದ್ದಾರೆ!

ಪರಿಶೀಲನೆ, ಶೀಘ್ರ ಕ್ರಮ, ಅನುದಾನ ಬಿಡುಗಡೆ ಎಂಬ ಹೇಳಿಕೆಗಳನ್ನು ಬಿಟ್ಟು ಕಾಮಗಾರಿ ಮಾಡಿ ತೋರಿಸಿ ಎಂಬುವುದೇ ಸದ್ಯದ ಬೇಡಿಕೆ!

Latest Indian news

Popular Stories