ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದವರು ಮಹರ್ಷಿ ವಾಲ್ಮೀಕಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ

ಕಾರವಾರ : ಶ್ರೀ ಮಹರ್ಷಿ ವಾಲ್ಮೀಕಿ ಅವರು ತಾವು ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿ ಸತ್ಯ , ಕಾಯಕ, ಸಾಹಿತ್ಯ, ಪರಿಸರ ರಕ್ಷಣೆ, ಮಹಿಳೆಯರಿಗೆ ಗೌರವ ನೀಡುವುದು ಸೇರಿದಂತೆ ಹಲವು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.


ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಜೀವನದಲ್ಲಿ ಸತ್ಯದ ಪರವಾಗಿ ನಿಂತುಕೊಂಡಾಗ ಮಾತ್ರ ಭವಿಷ್ಯದಲ್ಲಿ ಮುಂದೆ ಬರಲು ಸಾಧ್ಯವಿದೆ. ಸಾಧನೆಯ ಹಾದಿಗೆ ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಿದ್ದು, ಅವುಗಳನ್ನು ಎದುರಿಸಿ ಪ್ರಮಾಣಿಕವಾಗಿ ಪ್ರಯತ್ನ ಮಾಡಿದಲ್ಲಿ ಯಶಸ್ಸಿನ ಪ್ರತಿಫಲ ದೊರೆಯಲಿದೆ ಎಂಬುದನ್ನು ರಾಮಾಯಣದಲ್ಲಿ ನೋಡಬಹುದಾಗಿದೆ ಎಂದು ಹೇಳಿದರು.


ರಾಮಾಯಣದಲ್ಲಿ ಕೇವಲ ಮನುಷ್ಯರಲ್ಲದೇ ಪ್ರಾಣಿ, ಪಕ್ಷಿ, ಪರಿಸರದ ಬಗ್ಗೆ ಬರೆಯಲಾಗಿದೆ. ಅಳಿಲು ಸೇವೆಯ ಉಲ್ಲೇಖ ಸಹ ರಾಮಾಯಣದಲ್ಲಿದೆ. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಶಿಕ್ಷಣ ಮತ್ತು ಇತರೆ ಸೌಲಭ್ಯಗಳು ಸಿಗುವಂತೆ ಮಾಡಲು, ಬಡವರು ಮುಖ್ಯ ವಾಹಿನಿಗೆ ಬರುವಂತಾಗಲು ವಿವಿಧ ಸಂಘಟನೆಗಳ ಮುಖಂಡರು ಕೆಲಸ ಮಾಡಬೇಕು ಎಂದರು‌. ವಾಲ್ಮೀಕಿ ರಾಮಾಯಣದ ಆಶಯಗಳನ್ನು ಅರಿತುಕೊಂಡು, ಅವುಗಳನ್ನು ನಾವೆಲ್ಲರೂ ರಕ್ಷಣೆ ಮಾಡೋಣ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾತನಾಡಿ, ಮಾನವ ಸಂಬಂಧಗಳಿಗೆ ಬೆಲೆ ಕೊಡಬೇಕು, ಮಹಿಳೆಯರಿಗೆ ರಕ್ಷಣೆ, ಸಮಾನತೆ, ಸಹೋದರತ್ವ ,ಗುರು ಹಿರಿಯರಿಗೆ ಗೌರವ ಕೊಡಬೇಕು ಎಂಬ ಸಾತ್ವಿಕ ಗುಣಗಳು ವಾಲ್ಮೀಕಿಯವರ ರಾಮಾಯಣದಲ್ಲಿವೆ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಲ್ಲಿವೆ ಎಂದರು.
ಶಿಕ್ಷಣ, ಉದ್ಯೋಗ, ವ್ಯಾಪಾರದಲ್ಲಿ ಹಿಂದುಳಿದ ಸಮುದಾದವರು ಮುಂದೆ ಬಂದಾಗ ಮಾತ್ರ ಸಂವಿಧಾನ ಮತ್ತು ವಾಲ್ಮೀಕಿ ಅವರ ಆಶಯಗಳು ಈಡೇರಲಿವೆ ಎಂದರು‌.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ನಗರ ಸಭೆಯ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ವೈ.ಕೆ, ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.
….

Latest Indian news

Popular Stories