ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಈ ಬಾರಿ ಮಹಿಳೆಗೆ ಸಿಗಲಿದೆಯೇ ಅಧ್ಯಕ್ಷ ಪಟ್ಟ?

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪ್ರದೇಶ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸ್ಪರ್ಧೆ ಜೋರಾಗಿದ್ದು, ದೀಪಿಕಾ ರೆಡ್ಡಿ, ಎಚ್‌.ಎಸ್‌. ಮಂಜುನಾಥ್‌ ಸೇರಿದಂತೆ 13 ಮಂದಿ ಅಧ್ಯಕ್ಷ ಸ್ಥಾನಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.

ಯುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿಯ ಜತೆ ಜತೆಗೇ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯುತ್ತಿದೆ. ವಿಶೇಷವೆಂದರೆ, ಭವಿಷ್ಯದ ನಾಯಕತ್ವಕ್ಕೆ ಮಹತ್ವದ ಮೆಟ್ಟಿಲಾದ ಈ ಸ್ಥಾನದ ಚುನಾವಣೆಯಲ್ಲಿ ಈ ಸಲ ಪುರುಷ ಅಭ್ಯರ್ಥಿಗಳಿಗೆ ದೀಪಿಕಾ ರೆಡ್ಡಿ, ದಿವ್ಯಾ ಅವರೂ ಪೈಪೋಟಿ ನೀಡುತ್ತಿದ್ದಾರೆ.

ಆ. 20ರಿಂದ ರಾಜ್ಯಾದ್ಯಂತ ಯುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಆರಂಭವಾಗಿದ್ದು, ಸೆ. 20ಕ್ಕೆ ಮುಕ್ತಾಯವಾಗಲಿದೆ. ಮೊಬೈಲ್‌ ಆಪ್‌ನಲ್ಲಿ ನೋಂದಣಿಯಾಗಿ ಸದಸ್ಯತ್ವ ಪಡೆಯುತ್ತಿದ್ದಂತೆ ಮತದಾನಕ್ಕೆ ಅವಕಾಶ ಸಿಗುತ್ತಿದ್ದು, ಈವರೆಗೆ 14 ಲಕ್ಷಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಇನ್ನೂ 4-5 ಲಕ್ಷ ಮತ ಚಲಾವಣೆಯಾಗುವ ನಿರೀಕ್ಷೆಯಿದೆ.

ಯುವ ಕಾಂಗ್ರೆಸ್‌ನಲ್ಲಿ ಹಾಲಿ ಉಪಾಧ್ಯಕ್ಷೆ ಆಗಿರುವ ದೀಪಿಕಾ ರೆಡ್ಡಿ ಹಾಗೂ ಹಾಲಿ ಕಾರ್ಯಾಧ್ಯಕ್ಷ ಎಚ್‌.ಎಸ್‌. ಮಂಜುನಾಥ್‌ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮಂಜುನಾಥ್‌ ಚೆಟ್ಟಿ, ದಿವ್ಯಾ, ಅಬ್ದುಲ್‌ ಸೇರಿದಂತೆ ಒಟ್ಟು 13 ಮಂದಿ ಚುನಾವಣೆ ಕಣದಲ್ಲಿದ್ದಾರೆ. ನೋಂದಾಯಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶವಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷ ಸ್ಥಾನಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ.

ನೋಂದಾಯಿತ ಸದಸ್ಯರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ದೀಪಿಕಾ ರೆಡ್ಡಿ ಅವರಿಗೆ ಗೆಲುವು ದೊರೆತರೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಇತಿಹಾಸದಲ್ಲಿ ಮಹಿಳೆಯೊಬ್ಬರು ಈ ಮಹತ್ವದ ಹುದ್ದೆ ಅಲಂಕರಿಸಿದಂತಾಗುತ್ತದೆ.

Latest Indian news

Popular Stories