ಅನಂತಪುರ: ಪೆಟ್ರೋಲ್ ಬಂಕ್ ನಲ್ಲಿ ಖರೀದಿಸಿದ ಪೆಟ್ರೋಲ್ ಲೀಕ್ ಆಗಿ ಬೆಂಕಿ ಹೊತ್ತುಕೊಂಡ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ವರದಿಯಾಗಿದೆ.
ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಪಟ್ಟಣದಲ್ಲಿ ಭಾರೀ ಅನಾಹುತ ತಪ್ಪಿದ್ದು, ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಬಂಕ್ ನಿಂದ ವ್ಯಕ್ತಿಯೊಬ್ಬ ಕ್ಯಾನ್ ನಲ್ಲಿ ಐದು ಲೀಟರ್ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ದಾರಿ ಮಧ್ಯೆ ಅಂಗಡಿಯೊಂದರಲ್ಲಿ ಬೈಕ್ ನಿಲ್ಲಿಸಿ ಪೆಟ್ರೋಲ್ ತುಂಬಿದ ಕ್ಯಾನ್ ಅನ್ನು ಬೈಕ್ ಪಕ್ಕದಲ್ಲಿಟ್ಟು ಅಂಗಡಿಗೆ ಹೋಗಿದ್ದಾನೆ. ಆದರೆ, ಈ ವೇಳೆಗಾಗಲೇ ಕ್ಯಾನ್ ಒಡೆದು ಎಲ್ಲ ಪೆಟ್ರೋಲ್ ಕೆಳಗೆ ಸುರಿದಿದೆ.
ಅದೇ ಅಂಗಡಿಯಲ್ಲಿ ನಿಂತಿದ್ದ ವ್ಯಕ್ತಿ ಸಿಗರೇಟ್ ತೆಗೆದುಕೊಂಡು ಅದಕ್ಕೆ ಬೆಂಕಿ ಹಚ್ಚಿ ಕೆಳಗೆ ಪೆಟ್ರೋಲ್ ಲೀಕ್ ಆಗಿರುವ ಅರಿವೇ ಇಲ್ಲದೇ ಕಡ್ಡಿಯನ್ನು ಕೆಳಗೆ ಎಸೆದಿದ್ದಾನೆ. ಕ್ಷಣಮಾತ್ರದಲ್ಲಿ ಪೆಟ್ರೋಲ್ ಗೆ ಬೆಂಕಿ ಹತ್ತಿಕೊಂಡಿದ್ದು, ಇಡೀ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ.
ಈ ವೇಳೆ ಬೈಕ್ ಸವಾರ ತನ್ನ ಬೈಕ್ ಅನ್ನು ದೂರ ತೆಗೆದುಕೊಂಡು ಹೋಗುವ ಪ್ರಯತ್ನಕೂಡ ಮಾಡಿದ್ದಾನೆ. ಅದೇ ಹೊತ್ತಿನಲ್ಲಿ ಸಿಗರೇಟ್ ಸೇದುತ್ತಿದ್ದ ವ್ಯಕ್ತಿಗಳೂ ಕೂಡ ಅಲ್ಲಿಂದ ಕಾಲ್ಕಿತ್ತಿದ್ದು, ಬೆಂಕಿ ಮೊದಲು ಪಕ್ಕದಲ್ಲಿದ್ದ ದ್ವಿಚಕ್ರವಾಹನಕ್ಕೆ ವ್ಯಾಪಿಸಿದಾಗ ವ್ಯಕ್ತಿಯೊಬ್ಬರು ಅದನ್ನು ಪಕ್ಕಕ್ಕೆ ಸರಿಸಿ ಬೆಂಕಿ ನಂದಿಸಿದ್ದಾರೆ.
ಭಾರೀ ಬೆಂಕಿ ಕ್ಷಣಮಾತ್ರದಲ್ಲಿ ರಸ್ತೆಯ ಅಕ್ಕಪಕ್ಕದ ಅಂಗಡಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ವ್ಯಾಪಿಸಿ ಅವು ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಎಚ್ಚೆತ್ತ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಬೆಂಕಿ ಮೇಲೆ ನೀರು ಹಾಕಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆ ಮೂಲಕ ಆಗಬಹುದಾಗಿದ್ದ ದೊಡ್ಡ ಅಪಾಯವೊಂದು ತಪ್ಪಿದೆ. ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಕಿ ಹರಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.