ಬೆಳಗಾವಿಯಲ್ಲಿ ಬಾಲಗಂಗಾಧರ ತಿಲಕ್ ಆರಂಭಿಸಿದ ಗಣೇಶೋತ್ಸವಕ್ಕೆ 120 ವರ್ಷ

ಕರ್ನಾಟಕದ ಬೆಳಗಾವಿಯ ಝೇಂಡಾ ಚೌಕ್​ನಲ್ಲಿನ ಸಾರ್ವಜನಿಕ ಗಣೇಶೋತ್ಸವ 120ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಗಣೇಶೋತ್ಸವ ಸ್ವಾತಂತ್ರ್ಯ ಪೂರ್ವ 1905ರಲ್ಲಿ ಆರಂಭವಾಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕರು ಇಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿದರು.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಒಟ್ಟುಗೂಡಿಸಲು ಬೆಳಗಾವಿಯಲ್ಲಿ (Belagavi) ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರು (Bal Gangadhar Tilak) ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ (Ganesha Festival) 120ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ರಾಜ್ಯದಲ್ಲೇ ಮೊಟ್ಟ ಮೊದಲ ಸಾರ್ವಜನಿಕ ಗಣಪತಿ ಉತ್ಸವ ಮಂಡಳಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಅದು ಬ್ರಿಟಿಷರ ವಿರುದ್ಧ ಚಳುವಳಿ ನಡೆಯುತ್ತಿದ್ದ ಸಂದರ್ಭ. ಹೇಗಾದರೂ ಮಾಡಿ ಜನರನ್ನು ಸಂಘಟಿಸಿ, ಹೋರಾಟ ತೀವ್ರಗೊಳಿಸಬೇಕೆಂಬ ಉದ್ದೇಶದಿಂದ ಮನೆಗಳಿಗೆ ಸೀಮಿತವಾಗಿದ್ದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಬಾಲಗಂಗಾಧರ ತಿಲಕರು ಕರೆ ನೀಡಿದ್ದರು. 1893ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮೊಟ್ಟ ಮೊದಲ ಸಾರ್ವಜನಿಕ ಗಣೇಶೋತ್ಸವ ಆರಂಭಿಸುತ್ತಾರೆ. ನಂತರ‌ ಮುಂಬೈನಲ್ಲೂ ಆರಂಭವಾಗುತ್ತದೆ.

ಇದರ ಪ್ರಭಾವ ಪಕ್ಕದ ಕರ್ನಾಟಕ ರಾಜ್ಯದ ಬೆಳಗಾವಿ ಮೇಲೂ ಬೀರುತ್ತದೆ. 1905ರಲ್ಲಿ ಸ್ವತಃ ತಿಲಕರೇ ಬೆಳಗಾವಿಗೆ ಆಗಮಿಸಿ ಇಲ್ಲಿನ ಝೇಂಡಾ ಚೌಕ್​ನ ಶಾಂತಾರಾಮ್ ವಿಷ್ಣು ಪಾಟನೇಕರ್ ಅವರ ಕಿರಾಣಿ ಅಂಗಡಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ಆಗ ತಿಲಕರಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಗೋವಿಂದರಾವ್ ಯಾಳಗಿ ಮತ್ತು ಗಂಗಾಧರ ರಾವ್ ದೇಶಪಾಂಡೆ ಸೇರಿ ಮತ್ತಿತರು ಸಾಥ್ ಕೊಟ್ಟಿದ್ದರು.

ಸಾರ್ವಜನಿಕ ಗಣಪತಿ ಉತ್ಸವ ಮಂಡಳಿ ಝೇಂಡಾ ಚೌಕ್ ಮಾರ್ಕೆಟ್ ಹೆಸರಿನಲ್ಲಿ ಅಂದಿನಿಂದ ಇಂದಿನವರೆಗೂ ಆ ಪರಂಪರೆ ಮುಂದುವರಿಸಿಕೊಂಡು ಬಂದಿದ್ದು, ರಾಜ್ಯದ ಹಿರಿಯ ಗಣೇಶ ಮಂಡಳಿ ಎಂದು ಗುರುತಿಸಿಕೊಂಡಿದೆ. ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತಿರುವ ಮಂಡಳಿ ಪದಾಧಿಕಾರಿಗಳು 12 ಅಡಿ ಎತ್ತರದ ಸುಂದರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಅತ್ಯಾಕರ್ಷಕ ಮಂಟಪ ನಿರ್ಮಿಸಿದ್ದಾರೆ.

ಮಂಡಳಿಯ ಖಜಾಂಚಿ ಅಜಿತ್ ಸಿದ್ದನ್ನವರ ಮಾತನಾಡಿ, “ಕರ್ನಾಟಕದಲ್ಲೇ ನಮ್ಮದು ಮೊಟ್ಟ ಮೊದಲ ಗಣೇಶ ಮಂಡಳಿ. ಕಲೆ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಕಳೆದ 19 ವರ್ಷಗಳಿಂದ ಆಯೋಜಿಸಿಕೊಂಡು ಬಂದಿದ್ದೇವೆ. ಈ ವರ್ಷವೂ ಯುವಕರಿಗಾಗಿ ಅಂತಾರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಿದ್ದೇವೆ. ಈ 11 ದಿನ‌ ಮಾಂಸಾಹಾರ ಹಾಗೂ ಸಾರಾಯಿಯನ್ನು ನಾವ್ಯಾರೂ ಮುಟ್ಟುವುದಿಲ್ಲ. ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರನ್ನು ಪೂಜಿಸುತ್ತೇವೆ.‌ ಪರಿಸರಕ್ಕೆ ಹಾನಿಯಾಗುವ ಪಟಾಕಿ ಹಚ್ಚುವುದಿಲ್ಲ. ಅಲ್ಲದೇ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಡಾಲ್ಬಿ ಬಳಸದೆ, ಜಾನಪದ ಕಲಾತಂಡಗಳನ್ನು ಬಳಸುತ್ತೇವೆ” ಎಂದು ಹೇಳಿದರು.

ಮಿಲಿಂದ ಪಾಟನೇಕರ್ ಮಾತನಾಡಿ, “ಮೊದಲು ಗಣೇಶನ ಮೂರ್ತಿ ಇಟ್ಟಿದ್ದು ನಮ್ಮ ಅಂಗಡಿಯಲ್ಲೆ. ಕೊರೊನಾ ಸಮಯವಾದ 2019 ಮತ್ತು 2020ರಲ್ಲಿ ನಮ್ಮ ಅಂಗಡಿಯಲ್ಲೇ ಗಣಪತಿ ಇಟ್ಟಿದ್ದು ಖುಷಿಯ ವಿಚಾರ. ಅದು ಆ ದೇವರೇ ನಮಗೆ ಕರುಣಿಸಿದ ಸೌಭಾಗ್ಯ. ಮೊದಲು ನಮ್ಮ ಅಜ್ಜ, ಬಳಿಕ ತಂದೆ ಗಣೇಶನ ಸೇವೆ ಸಲ್ಲಿಸಿದ್ದರು. ಈಗ ಮೂರನೇ ತಲೆಮಾರಿನವನಾದ ನಾನು ಕೂಡ ತುಂಬಾ ಸಂತೋಷ ಮತ್ತು‌ ಅಭಿಮಾನದಿಂದ ಕೆಲಸ ಮಾಡುತ್ತಿದ್ದೇನೆ” ಎಂದರು.

390 ಸಾರ್ವಜನಿಕ‌ ಮಂಡಳಿಗಳು:ಬೆಳಗಾವಿ ನಗರದಲ್ಲಿ ಸದ್ಯ ಒಟ್ಟು 390 ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಇದೆ. ಇದರಲ್ಲಿ 12 ಮಂಡಳಿಗಳು ಶತಮಾನೋತ್ಸವ ಕಂಡಿರುವುದು ಮತ್ತೊಂದು ವಿಶೇಷ. ಎಲ್ಲ ಮಂಡಳಿಗಳೂ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತವೆ. ಝೇಂಡಾ ಚೌಕ್ ಮಂಡಳಿಯಿಂದ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಿದ್ದು, 2.5 ಲಕ್ಷ ರೂ. ನಗದು ಬಹುಮಾನ ಇಟ್ಟಿದ್ದೇವೆ ಎಂದು ಗಣೇಶ ಮಂಡಳಿ ಮುಖಂಡ ವಿಕಾಸ ಕಲಘಟಗಿ ತಿಳಿಸಿದರು.

ಮಹಾರಾಷ್ಟ್ರ ರಾಜ್ಯದಷ್ಟೇ ಬೆಳಗಾವಿಯಲ್ಲೂ ಅದ್ಧೂರಿಯಾಗಿ‌ ಗಣೇಶೋತ್ಸವ ಆಚರಿಸಲಾಗುತ್ತಿದೆ. ದಿನನಿತ್ಯ ಸಾವಿರಾರು ಜನರು ಅತ್ಯಾಕರ್ಷಕ ಗಣೇಶ ಮೂರ್ತಿಗಳನ್ನು‌ ಕಣ್ತುಂಬಿಕೊಳ್ಳುತ್ತಿದ್ದಾರೆ. ಮಂಟಪಗಳು, ಲೈಟಿಂಗ್-ಕಾರಂಜಿ ಕಣ್ಮನ ಸೆಳೆಯುತ್ತಿವೆ.

Latest Indian news

Popular Stories