ರಾಂಚಿ: ಆನೆ ದಾಳಿ ಭಯದಿಂದ ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಜಾರ್ಖಂಡ್ ನಡೆದಿದೆ.
ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಚಪ್ಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ‘ಆನೆ ದಾಳಿಗೆ ಹೆದರಿ ಒಂದೇ ಕುಟುಂಬದ ಸುಮಾರು 8 ರಿಂದ 10 ಮಕ್ಕಳು ತಮ್ಮ ಹೆಂಚಿನ ಮನೆಯ ನೆಲದ ಮೇಲೆ ಮಲಗಿದ್ದರು. ಈ ವೇಳೆ ಮಧ್ಯರಾತ್ರಿ ಪಕ್ಕದ ಹೊಲದಿಂದ ವಿಷಕಾರಿ ಹಾವೊಂದು ಆಹಾರ ಅರಸುತ್ತ ಮನೆಯೊಳಗೆ ಬಂದಿದ್ದು, ಈ ವೇಳೆ ಮೂವರು ಮಕ್ಕಳನ್ನು ಕಚ್ಚಿದೆ.
ಹಾವಿನ ಕಡಿತದ ಬಳಿಕ ಮಕ್ಕಳು ಅಳಲು ಆರಂಭಿಸಿದ್ದು ಈ ವೇಳೆ ಮಕ್ಕಳು ಹಾವಿನ ಕಡಿತ ಮನಗಂಡು ಕೂಡಲೇ ಹಳ್ಳಿಯಲ್ಲಿದ್ದ ಮಾಂತ್ರಿಕನ ಬಳಿಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಈ ವೇಳೆ ಹಾವಿನ ಕಡಿತಕ್ಕೊಳಗಾಗಿದ್ದ ಹೆಣ್ಣು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಕೂಡ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಕ್ಕಳನ್ನು ಪನ್ನಾಲಾಲ್ ಕೊರ್ವಾ (15), ಕಾಂಚನ್ ಕುಮಾರಿ (8), ಮತ್ತು ಬೇಬಿ ಕುಮಾರಿ (9) ಎಂದು ಗುರುತಿಸಲಾಗಿದೆ ಎಂದು ಚಿನಿಯಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ನೀರಜ್ ಕುಮಾರ್ ತಿಳಿಸಿದ್ದಾರೆ.
ಇನ್ನು ಈ ಪ್ರಾಂತ್ಯದಲ್ಲಿ ಕಳೆದೊಂದು ತಿಂಗಳಿಂದ ಆನೆಗಳ ಹಾವಳಿ ತೀವ್ರವಾಗಿತ್ತು. ಹೀಗಾಗಿ ಇಲ್ಲಿನ ಸ್ಥಳೀಯ ಅರಣ್ಯಾಧಿಕಾರಿಗಳು ಗ್ರಾಮಸ್ಥರನ್ನು ಒಟ್ಟಿಗೇ ಇರಲು ಸೂಚಿಸಿದ್ದರು. ಒಟ್ಟಿಗೇ ಇದ್ದರೆ ಆನೆಗಳು ದಾಳಿ ಮಾಡಲು ಹಿಂದೇಟು ಹಾಕುತ್ತವೆ ಎಂಬ ಕಾರಣಕ್ಕೆ ಈ ರೀತಿ ಸೂಚನೆ ನೀಡಿದ್ದರು.
ಅಧಿಕಾರಿಗಳ ಸೂಚನೆ ಮೇರೆಗೆ ಇಲ್ಲಿನ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಲ್ಲಿ ಮಲಗುತ್ತಿದ್ದರು. ಕೆಲ ಗ್ರಾಮಸ್ಥರು ಶಾಲಾ ಕಟ್ಟಡಗಳ ಛಾವಣಿಯ ಮೇಲೆ ಅಥವಾ ಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಗುಂಪುಗಳಾಗಿ ಮಲಗುತ್ತಿದ್ದರು.
ಆದರೆ ಈ ರೀತಿ ಒಟ್ಟಿಗೆ ಮಲಗಿದ್ದರೂ ಜವರಾಯ ಮಾತ್ರ ಹಾವಿನ ರೂಪದಲ್ಲಿ ಬಂದು ಮಕ್ಕಳ ಪ್ರಾಣ ಕಸಿದಿದ್ದಾನೆ.