ಪಕ್ಷ ವಿರೋಧಿ ಚಟುವಟಿಕೆ | ಖೂಬಾ ಅಪ್ತ ವಲಯದಲ್ಲಿ ಗುರುತಿಸಿಕೊಂಡ ಕಾರ್ಯಕರ್ತರ ಉಚ್ಚಾಟನೆ

ಔರಾದ್: ‘2023ರ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿಯ ಮೀಸಲು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ 26 ಜನರನ್ನು ಪುನಃ ಪಕ್ಷದಲ್ಲಿ ಸೇರಿಸಿಕೊಳ್ಳದಿರಲು ಪಕ್ಷದ ಮಂಡಲ ಕೋರ್ ಕಮಿಟಿ ತೀರ್ಮಾನಿಸಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.

ಪಟ್ಟಣದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿನ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ 26 ಜನರು ಪಕ್ಷದಲ್ಲಿ ಇದ್ದುಕೊಂಡು ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಭು ಚವಾಣ್ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಚುನಾವಣೆ ವೇಳೆ ಕೆಲವರು ರಾಜೀನಾಮೆ ನಾಟಕ ಮಾಡಿದ್ದಾರೆ. ಮತ್ತೆ ಕೆಲವರು ಬೇರೆ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ.

ಕೆಲವರು ತಟಸ್ಥವಾಗಿ ಉಳಿದು ಈಗ ಅವರೆಲ್ಲ ಮತ್ತೆ ಪಕ್ಷಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ಪಕ್ಷ ವಿರೋಧಿ ಕೃತ್ಯದ ಕುರಿತು ಪಕ್ಷದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ಗಮನಕ್ಕೂ ತರಲಾಗಿದೆ. ಅವರ ಸಲಹೆ ಹಾಗೂ ಮಾರ್ಗದರ್ಶನ ಪಡೆದು ಇವರನ್ನು ಮುಂದಿನ 6 ವರ್ಷಗಳ ಪಕ್ಷದ ಚಟುವಟಿಕೆಯಿಂದ ದೂರ ಇಡಲು ಕೋರ್ ಕಮೀಟಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಉಚ್ಚಾಟನೆಗೊಂಡವರ ಪಟ್ಟಿ

ಪ್ರಕಾಶ ಟೊಣ್ಣೆ ಕಮಲನಗರ, ಬಂಡೆಪ್ಪ ಕಂಟೆ ಔರಾದ, ಸುಚಿತ್ರಾ ಹಂಗರಗೆ ಎಕಂಬಾ, ಚಂದ್ರಶೇಖರ ದೇಶಮುಖ, ಕಾಶಿನಾಥ ಜಾಧವ, ಸುನಿಲಕುಮಾರ ದೇಶಮುಖ, ಮಾಣಿಕ ಚವಾಣ್, ವಸಂತ ಮಧುಕರರಾವ ಜೋಶಿ, ಕಿರಣ ಪಾಟೀಲ ಚಿಕ್ಲಿ(ಜೆ), ಅರವಿಂದ ಪಾಟೀಲ ಎಕಂಬಾ, ಚಂದ್ರಪಾಲ ಪಾಟೀಲ ವಕೀಲ, ದೀಪಕ ಪಾಟೀಲ ಚಾಂದೋರಿ, ರಾಮರಾವ ರಾಠೋಡ, ಹುಲ್ಯಾಳ ತಾಂಡಾ, ಬಂಡೆಪ್ಪ ಕೋಟೆ, ಸೋಮನಾಥ ಖಡಕೆ, ಓಂಪ್ರಕಾಶ ಬಿರಾದಾರ, ಸಂತೋಷ ಬಿರಾದಾರ, ಗೋವಿಂದ ಪಾಟೀಲ, ನಾರಾಯಣ ಪಾಟೀಲ ಭಂಡಾರಕುಮಟ, ಸಂಜುಕುಮಾರ ಪಾಟೀಲ ಹಿಪ್ಪಳಗಾಂವ, ಚಂದ್ರಕಾಂತ ಹೊನ್ನಾ, ಜ್ಞಾನೇಶ್ವರ ಪಾಟೀಲ ಹೊಳಸಮುದ್ರ, ಸಂಗಮೇಶ ಪಾಟೀಲ ಔರಾದ, ರಾಮ ಕದಮ ಹೊಳಸಮುದ್ರ, ಶ್ರೀರಂಗ ಪರಿಹಾರ, ಚನ್ನಬಸವ ಬಿರಾದಾರ ಕೌಠಾ

ಪಕ್ಷ ವಿರೋಧಿಗಳನ್ನು ಹೊರ ಹಾಕಲು ವರಿಷ್ಠರ ಸೂಚನೆ: ಚವಾಣ್
‘2023ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲೆಲ್ಲಿ ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆಯೋ ಅಂತಹ ಕಡೆಗಳಲ್ಲಿ ಪಕ್ಷದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ’ ಎಂದು ಶಾಸಕ ಪ್ರಭು ಚವಾಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ನಮ್ಮ ಕ್ಷೇತ್ರದಲ್ಲಿ ಪಕ್ಷದ ಒಂದು ದೊಡ್ಡ ಗುಂಪು ಪಕ್ಷ ವಿರೋಧಿ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತಿದೆ.
ಅವರೆಲ್ಲ ಬಹಿರಂಗವಾಗಿಯೇ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು. ಆದರೆ ಪಕ್ಷದ ನಿಷ್ಠಾವಂತರು ಹಗಲಿರುಳು ಕೆಲಸ ಮಾಡಿ ನನ್ನನ್ನು ಗೆಲ್ಲಿಸಿ ತಂದಿದ್ದಾರೆ. ಇಂತಹ ನಿಷ್ಠಾವಂತರಿಗೆ ಬೆಲೆ ಸಿಗಬೇಕಾದರೆ ಪಕ್ಷ ವಿರೋಧಿಗಳು ಮೊದಲು ಹೊರ ಹೋಗಬೇಕು. ಆ ಕೆಲಸ ಈಗ ರಾಜ್ಯದ ಎಲ್ಲ ಕಡೆ ನಡೆಯುತ್ತಿದೆ ಎಂದು ಹೇಳಿದರು.

ವರದಿ : ಹಣಮಂತ ದೇಶಮುಖ

Latest Indian news

Popular Stories