ಚಂಡೀಗಢ: ಹಸು ಕಳ್ಳಸಾಗಾಣಿಕೆ ಶಂಕೆ ಮೇರೆಗೆ ಗೋರಕ್ಷಕ ಕಾರ್ಯಕರ್ತರಿಂದ ಕೊಲೆಗೀಡಾದ ಆರ್ಯನ್ ಮಿಶ್ರಾ (Aryan Mishra) ‘ಮುಸ್ಲಿಂ ಎಂದು ಭಾವಿಸಿದ್ದೆ’ ಎಂದು ಆರೋಪಿ ಹೇಳಿದ್ದಾನೆ.
ಕಳೆದ ಆಗಸ್ಟ್ 24 ರ ಮುಂಜಾನೆ ಹರಿಯಾಣದ ಫರಿದಾಬಾದ್‌ನಲ್ಲಿ ಗೋರಕ್ಷಕ ಕಾರ್ಯಕರ್ತರು ಕಾರೊಂದನ್ನು ಬೆನ್ನು ಹತ್ತಿ ಅದರಲ್ಲಿದ್ದ 12 ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಮಿಶ್ರಾ (Aryan Mishra)ನನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.
ಈ ಪ್ರಕರಣ ಸಂಬಂಧ ಪೊಲೀಸರು ಸೌರಭ್, ಅನಿಲ್, ವರುಣ್, ಕೃಷ್ಣ ಮತ್ತು ಆದೇಶ್ ಎಂಬ ಐದು ಮಂದಿಯನ್ನು ಆಗಸ್ಟ್ 28 ರಂದು ಬಂಧಿಸಿದ್ದು, ಈ ಪೈಕಿ ಹತ್ಯೆಗೀಡಾದ ಆರ್ಯನ್ ಮಿಶ್ರಾ ತಂದೆ ಸಿಯಾನಂದ ಮಿಶ್ರಾ ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ
ಇನ್ನು ಆರ್ಯನ್ ಮಿಶ್ರಾ ತಂದೆ ಸಿಯಾನಂದ್ ಮಿಶ್ರಾ ತಮ್ಮ ಮಗನ ಕೊಲೆ ಪ್ರಕರಣದ ಆರೋಪಿಗಳನ್ನು ಜೈಲಿನಲ್ಲಿ ಭೇಟಿ ಮಾಡಿದ್ದು ಈ ವೇಳೆ ಅವರು ನೀಡಿರುವ ಹೇಳಿಕೆಗಳು ವ್ಯಾಪಕ ಸುದ್ದಿಗೆ ಗ್ರಾಸವಾಗಿವೆ. ಸಿಯಾನಂದ್ ಮಿಶ್ರಾ ಹೇಳಿರುವಂತೆ, ತನ್ನ ಮಗನನ್ನು ಗೋ ಕಳ್ಳ ಸಾಗಣೆದಾರ ಮುಸ್ಲಿಂ ವ್ಯಕ್ತಿ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿ ಮೋನು ಮಾನೇಸರ್ ಹೇಳಿದ್ದಾನೆ ಎಂದು ಹೇಳಿದ್ದಾರೆ.
ನನ್ನ ಮಗ ಮುಸ್ಲಿಂ ಎಂದು ಅವರು ಭಾವಿಸಿದ್ದರು. ಈಗ ಬ್ರಾಹ್ಮಣನನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆ. ಸ್ಥಳೀಯವಾಗಿ ‘ಮೋನು ಮಾನೇಸರ್’ ಎಂದು ಕರೆಯಲ್ಪಡುವ ಕುಖ್ಯಾತ ಕ್ರಿಮಿನಲ್ ತನ್ನ ಪಾದಗಳನ್ನು ಮುಟ್ಟಿ ಕ್ಷಮೆ ಯಾಚಿಸಿದ್ದಾನೆ ಎಂದು ಮಿಶ್ರಾ ಹೇಳಿದ್ದಾರೆ.
“ಐದು ಜನರ ಬಂಧನದಿಂದ ನನಗೆ ತೃಪ್ತಿಯಾಗಿದೆ. ಫರಿದಾಬಾದ್‌ನಲ್ಲಿ ನನಗೆ ಏನೂ ಉಳಿದಿಲ್ಲ. ನಾನು ನನ್ನ ಸ್ವಂತ ಸ್ಥಳಕ್ಕೆ ಮರಳಲು ಬಯಸುತ್ತೇನೆ. ಆದರೆ ನನ್ನ ಮನಸ್ಸಿನಲ್ಲಿ ಇನ್ನೂ ಹಲವು ಪ್ರಶ್ನೆಗಳು ಮೂಡುತ್ತಿವೆ. ನನ್ನ ಮಗನೊಂದಿಗೆ ಕಾರಿನಲ್ಲಿ ಅನೇಕ ಜನರು ಇದ್ದರು, ಆದರೆ ನನ್ನ ಮಗನ ಮೇಲೆ ಮಾತ್ರ ಗುಂಡಿನ ದಾಳಿಯಾಗಿದೆ. ಬೇರೆ ಯಾರಿಗೂ ಏನೂ ಆಗಿಲ್ಲ. ಈ ವಿಷಯವನ್ನು ಗಂಭೀರವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹರ್ಷಿತ್ ಮತ್ತು ಶಾಂಕಿ ನನ್ನ ಮಗನನ್ನು ಕಾರಿನಲ್ಲಿ ಪಲ್ವಾಲ್‌ಗೆ ಕರೆದುಕೊಂಡು ಹೋಗಿದ್ದರು. ಶಾಂಕಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು, ಯಾರೊಂದಿಗಾದರೂ ಜಗಳ ಮಾಡಿಕೊಂಡಿದ್ದರೇ?. ಅನಿಲ್ ಕೌಶಿಕ್ ತನ್ನ ಮಗನನ್ನು ಹಸು ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದು ನಿಜವೇ ಆಗಿದ್ದರೆ ಗೋರಕ್ಷಕರಿಗೆ ಯಾರನ್ನಾದರೂ ಗುಂಡು ಹಾರಿಸಿ ಕೊಲ್ಲುವ ಹಕ್ಕು ಕೊಟ್ಟವರು ಯಾರು? ಎಂದು ಸಿಯಾನಂದ ಮಿಶ್ರಾ ಪ್ರಶ್ನಿಸಿದ್ದಾರೆ.
ಹರ್ಯಾಣದಲ್ಲಿ ಗೋರಕ್ಷಣೆ ಹೆಸರಲ್ಲಿ ಅಪರಾಧ
ಇನ್ನು ಈ ಘಟನೆಯಾದ ಮೂರು ದಿನಗಳ ನಂತರ, ಆಗಸ್ಟ್ 27 ರಂದು, ಪಶ್ಚಿಮ ಬಂಗಾಳದ ಸಬೀರ್ ಎಂಬ ಮುಸ್ಲಿಂ ಚಿಂದಿ ಆಯುವ ವ್ಯಕ್ತಿಯನ್ನು ಹರಿಯಾಣದಲ್ಲಿ ಗೋರಕ್ಷಕ ಕಾರ್ಯಕರ್ತರು ಗೋಮಾಂಸ ಸೇವಿಸಿದ್ದಾರೆಂದು ಭಾವಿಸಿ ಹೊಡೆದು ಕೊಂದು ಹಾಕಿದ್ದರು. ಚಾರ್ಖಿ ದಾದರ್‌ನ ಬಧ್ರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಸಬೀರ್ ಮತ್ತು ಅಸಿರುದ್ದೀನ್ ಎಂಬುವವರನ್ನು ತಮ್ಮ ಬಳಿ ಸ್ಕ್ರಾಪ್ ಇದೆ ಎಂದು ಹೇಳಿ ವ್ಯಾಪಾರದ ಆಮಿಷ ಒಡ್ಡಿ ಸ್ಥಳೀಯ ಬಸ್ ನಿಲ್ದಾಣಕ್ಕೆ ಕರೆದೊಯ್ದು ನಿರ್ದಯವಾಗಿ ಥಳಿಸಿದ್ದಾರೆ. ಈ ವೇಳೆ ದಾರಿಹೋಕರು ಮಧ್ಯಪ್ರವೇಶಿಸಿದಾಗ, ಅಪರಾಧಿಗಳು ತಮ್ಮ ಬೈಕ್ ಗಳಲ್ಲಿ ಸಂತ್ರಸ್ತರನ್ನು ಬೇರೆ ಸ್ಥಳಕ್ಕೆ ಕರೆದೊಯ್ದರು ಎನ್ನಲಾಗಿದೆ.
“ಆಗಸ್ಟ್ 27 ರ ಬೆಳಿಗ್ಗೆ, ಯುವಕರ ಗುಂಪೊಂದು ಬದ್ರಾ ಗ್ರಾಮದ ಬಳಿಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಚಿಂದಿ ಆಯುವ ಸಬೀರ್ ಬಳಿಗೆ ಬಂದು ಸ್ಥಳೀಯ ಬಸ್ ನಿಲ್ದಾಣಕ್ಕೆ ಕರೆದೊಯ್ದು, ತಮ್ಮ ಬಳಿ ಕೆಲವು ಸ್ಕ್ರ್ಯಾಪ್ ಇದೆ ಎಂದು ಹೇಳಿಕೊಂಡರು. ಹಸು ರಕ್ಷಕರು ಚಿಂದಿ ಆಯುವ ಅಸಿರುದ್ದೀನ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಪೊಲೀಸರ ಪ್ರಕಾರ, 26 ವರ್ಷದ ಸಬೀರ್ ಅವರ ಮೃತ ದೇಹವು ನಂತರ ಭಂಡ್ವಾ ಗ್ರಾಮದ ಕಾಲುವೆಯ ಬಳಿ ಪತ್ತೆಯಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಸಿರುದ್ದೀನ್ ಮತ್ತೊಂದು ಸ್ಥಳದಲ್ಲಿ ಪತ್ತೆಯಾಗಿದ್ದ. ಈ ಪ್ರಕರಣದಲ್ಲಿ ಇದುವರೆಗೆ ಅಭಿಷೇಕ್, ರವೀಂದರ್, ಮೋಹಿತ್, ಕಮಲಜೀತ್ ಮತ್ತು ಸಾಹಿಲ್ ಎಂಬ ಐದು ಜನರನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಇಬ್ಬರು ಬಾಲಾಪರಾಧಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.