ಭೋಪಾಲ್: ರಸ್ತೆಬದಿ ಅತ್ಯಾಚಾರವೆಸಗುತ್ತಿದ್ದ ಕೃತ್ಯವನ್ನು ಮೊಬೈಲ್ ಚಿತ್ರೀಕರಿಸಿ ವೈರಲ್ ಮಾಡಿದ ಆರೋಪದಡಿ ಆಟೋ ಚಾಲಕನೊಬ್ಬನನ್ನು ಬಂಧಿಸಲಾಗಿದೆ.
ಆರೋಪಿ ನಾಗ್ಡಾದ ಪ್ರಕಾಶ್ ನಗರದ ನಿವಾಸಿಯಾಗಿದ್ದು, ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನ್ ನನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
ಏನಿದು ಘಟನೆ?:ಬಿಜೆಪಿ ಆಡಳಿತದ ಮಧ್ಯಪ್ರದೇಶದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಒಂದಾಗಿರುವ ಕೊಯ್ಲಾ ಫಾಟಕ್ ಪ್ರದೇಶದಲ್ಲಿ ಬುಧವಾರ(ಸೆ.4ರಂದು) ಮಧ್ಯಾಹ್ನ ದುಷ್ಕರ್ಮಿ ಲೋಕೇಶ್ ಎಂಬಾತ ಚಿಂದಿ ಆಯುತ್ತಿದ್ದ ಸಂತ್ರಸ್ತೆಯನ್ನು ಮದುವೆ ಆಗುತ್ತೇನೆಂದು ಮನವೊಲಿಸಿ ಆಕೆಗೆ ಮದ್ಯ ಕುಡಿಸಿ ಕುಡಿದ ಅಮಲಿನಲ್ಲಿ ಆಕೆಯನ್ನು ರಸ್ತೆ ಬದಿಯ ಗುಡಿಸಲು(ಟೆಂಟ್) ಮನೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ.
ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಲೋಕೇಶ್ ನನ್ನು ಬಂಧಿಸಿದ್ದಾರೆ. ಆದರೆ ಕೃತ್ಯ ನಡೆಯುತ್ತಿದ್ದ ವೇಳೆ ದಾರಿಹೋಕರು ಮಹಿಳೆಯ ರಕ್ಷಣೆಗೆ ಧಾವಿಸುವ ಬದಲು ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದರು.
ಆರೋಪಿಗಳು ಉದ್ದೇಶಪೂರ್ವಕವಾಗಿ ವೀಡಿಯೋವನ್ನು ವೈರಲ್ ಮಾಡಿರುವ ಕುರಿತು ನಾವು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದು, ಆರೋಪಿ ಆಟೋ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಐಟಿ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 72, 77, 294 ರ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಶರ್ಮಾ ಮಾಹಿತಿ ನೀಡಿದ್ದಾರೆ.