ಭಟ್ಕಳ: ಲಾರಿ ಡಿಕ್ಕಿ ಹೊಡೆದು ಸ್ಕೂಟಿಯಲ್ಲಿದ್ದ ಯುವತಿ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

ಭಟ್ಕಳ: ತಾಲೂಕಿನ ವೆಂಕಟಾಪುರದ ನೀರಕಂಠ ರಸ್ತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಂಭವಿಸಿದ ಸ್ಕೂಟಿ ಹಾಗೂ ಲಾರಿಗಳ ನಡುವಿನ ಡಿಕ್ಕಿಯಲ್ಲಿ ಯುವತಿಯೋರ್ವಳು ಮೃತ ಪಟ್ಟ ಘಟನೆ ರವಿವಾರ ಬೆಳಿಗ್ಗೆ ಸಂಭವಿಸಿದೆ.

ಮೃತಳನ್ನು ಸಾಗರ ತಾಲೂಕಿನ ಕಾರ್ಗಲ್ ನಿವಾಸಿ ಲಿಕಿತಾ ಮಾಬ್ಲೇಶ್ವರ ಗೊಂಡ (23) ಎಂದು ಗುರುತಿಸಲಾಗಿದೆ.

ಭಟ್ಕಳ ಕಡೆಯಿಂದ ಶಿರಾಲಿಯ ಕಡೆಗೆ ಹೋಗುತ್ತಿದ್ದ ಸ್ಕೂಟಿಯನ್ನು ಚಾಲನೆ ಮಾಡುತ್ತಿದ್ದ ಗಣೇಶ ಗೊಂಡ (35) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದೂ ತಿಳಿದು ಬಂದಿದೆ. ಇನ್ನೋರ್ವ ಮಹಿಳೆ ಗಿರಿಜಾ ಗೊಂಡ (35) ಎನ್ನುವವರಿಗೆ ತೀವ್ರವಾದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಗಣೇಶ ಗೊಂಡ ಹಾಗೂ ಆತನ ಸಹೋದರಿ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಲಿಕಿತಾ ರಸ್ತೆಯ ಮೇಲೆ ಬಿದ್ದಿದ್ದಾರೆ ಈ ವೇಳೆ ಲಾರಿ ಚಕ್ರಗಳು ಆಕೆಯ ತಲೆ ಮೇಲೆ ಹಾಯ್ದು ಪರಿಣಾಮ ಲಿಖಿತಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆನ್ನಲಾಗಿದೆ.

ಸ್ಕೂಟಿ ಸವಾರ ಗಣೇಶ ಗೊಂಡ ಈತನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಶಿರಾಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನೋರ್ವ ಮಹಿಳೆ ಕೂಡಾ ಗಾಯಗೊಂಡಿದ್ದು ತಕ್ಷಣ ಪ್ರಥಮ ಚಿಕತ್ಸೆ ನೀಡಿ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದು ಆಕೆ ಯಾರು, ಹೇಗೆ ಗಾಯಗೊಂಡಳು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಕ್ರಮ ಕೈಗೊಂಡಿದ್ದಾರೆ.

Latest Indian news

Popular Stories