ಗ್ರಾ. ಪಂ. ನೌಕರರಿಗೆ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪ್ರತಿಭಟನೆ : ಕೇಂದ್ರ ಸರ್ಕಾರದ ವಿರುದ್ಧ ಸಿಐಟಿಯು ನಾಯಕರ ವಾಗ್ದಾಳಿ

ಕಾರವಾರ: ನ್ಯಾಯಾಲಯದ ಆದೇಶದಂತೆ ಸರ್ಕಾರ ಗ್ರಾಮ ಪಂಚಾಯಿತಿ ನೌಕರರಿಗೆ ನೀಡಬೇಕಿರುವ ಕನಿಷ್ಠ ವೇತನವನ್ನು ಕೂಡಲೇ ಜಾರಿ ಮಾಡುವಂತೆ ಒತ್ತಾಯಿಸಿ ಸಿಐಟಿಯು ಜೊತೆಗೆ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಬುಧುವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮ ಪಂಚಾಯಿತಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡರು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಪಂಚಾಯತಿಗಳಿಗೆ ಅನುದಾನ ಕಡಿತ ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ಯ ವಿರೋಧಿ ಧೋರಣೆ ಕಾರಣ‌ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಸಿ.ಆರ್. ಶಾನಭಾಗ ಆರೋಪಿಸಿದರು. ಬರುವ ಲೋಕಸಭಾ ಚುನಾವಣೆಯಲ್ಲಿ ಸರ್ವಾಧಿಕಾರಿ ಕೇಂದ್ರ ಸರ್ಕಾರವನ್ನು ಸೋಲಿಸಬೇಕು. ಉತ್ತರ ಕನ್ನಡದ ಹಾಲಿ ಸಂಸದರನ್ನು ಮೊದಲು ಸೋಲಿಸೋಣ ಎಂದರು.

ಸಿಐಟಿಯು ಮುಖಂಡ ತಿಲಕ್ ಗೌಡ ಮಾತನಾಡಿ
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರ ಪರವಾದ ನೀತಿಗಳನ್ನು ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸಬೇಕು. ರಸಗೊಬ್ಬರ ಒಳಗೊಂಡಂತೆ ಕೃಷಿ ಹಿಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೇಂದ್ರ ಸರಕಾರ ಕೈಬಿಡಬೇಕು. ರೈಲ್ವೆ, ವಿದ್ಯುತ್ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಎಲ್ಲಾ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ಈಗ ಅಧಿಕಾರದಲ್ಲಿ ಇರುವ ಬಿಜೆಪಿ ಇದನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು‌ .

ಸುಪ್ರಿಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಕನಿಷ್ಠ ವೇತನ ನಿಗದಿಪಡಿಸಲು ನ್ಯಾಯಾಲಯ ಆದೇಶಿಸಿದೆ. ಗ್ರಾಮ‌ ಪಂಚಾಯತ ನೌಕರರ ಸಂಘವು ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವಂತೆ ಹೋರಾಟ ರೂಪಿಸಿದ ಮೇಲೆ ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ . ಆದರೂ ಸರಕಾರ ವೇತನ ಹೆಚ್ಚಳಕ್ಕೆ

ಮೀನಾ ಮೇಷ ಎಣಿಸುತ್ತಿದ್ದು, ಕೂಡಲೇ ತಕ್ಷಣ ಕನಿಷ್ಟ ವೇತನ ರೂ. 31 ಸಾವಿರ ನೀಡಬೇಕೆಂದು ಪ್ರತಿಭಟನಾಕಾರರು
ಒತ್ತಾಯಿಸಿದರು‌. ಜಿಲ್ಲಾಡಳಿತದ ಪರವಾಗಿ ಸರ್ವೆ ಇಲಾಖೆಯ ಉಪ ನಿರ್ದೇಶಕ ರಾಜು ಪೂಜಾರಿ ಮನವಿ ಸ್ವೀಕರಿಸಿದರು. ಮನವಿಯನ್ನು ಕೇಂದ್ರ, ರಾಜ್ಯ ಸರಕಾರ, ಸಂಸದರಿಗೆ ಕಳುಹಿಸುವುದಾಗಿ ಹೇಳಿದರು‌.
……..

Latest Indian news

Popular Stories