ಈ ದೇಶದಲ್ಲಿ ಇಚ್ಚೆ ಇರುವ ಧರ್ಮಪಾಲನೆ ಮಾಡಬಹುದು – ಸಿದ್ದರಾಮಯ್ಯ

ಬೆಳಗಾವಿ: ಸಂವಿಧಾನ ಬಾಹಿರವಾಗಿರುವ ಕಾನೂನನ್ನು ಜಾರಿಗೆ ತಂದು ದೇಶದ ಕೋಮು ಸೌಹಾರ್ದ ಹಾಳು ಮಾಡುವುದೇ ಬಿಜೆಪಿಯಮಖ್ಯ ಉದ್ದೇಶವಾಗಿದೆ. ಹೀಗಾಗಿ ಸಂಘಪರಿವಾರದ ಸೂಚನೆ ಮೇರೆಗೆ ಸರ್ಕಾರ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುತ್ತಿರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾಯಿದೆ ಜಾರಿಗೆ ತರುವ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ.ಇದರ ಹಿಂದೆ ಜನರ ಹಿತವೇನೂ ಇಲ್ಲ. ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತನಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಬಿಜೆಪಿ ರ್ಕಾರ ಕೈ ಹಾಕಬಾರದು ಎಂದು ಒತ್ತಾಯಿಸಿದರು.

ಕ್ರಿಶ್ಚಿಯನ್ ಸಮುದಾಯ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಈ ಸಮುದಾಯದವರು ನಡೆಸುವ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಒಂದು ಸಮುದಾಯದವರು ಮಾತ್ರ ಹೋಗುವುದಿಲ್ಲ. ಹೋಗುವ ಎಲ್ಲರೂ ಮತಾಂತರ ಆಗಿಲ್ಲ. ಅದಕ್ಕಾಗಿ ಬಲವಂತವೂ ನಡೆಯುತ್ತಿಲ್ಲ.

‘ಈ ದೇಶದಲ್ಲಿ ಇಚ್ಛೆ ಇರುವ ಧರ್ಮ ಪಾಲನೆ ಮಾಡಬಹುದು. ಅದು ಅವರ ಸ್ವಾತಂತ್ರ್ಯ. ಅದನ್ನು ಕಿತ್ತಕೊಳ್ಳಬಾರದು. ಕಿತ್ತುಕೊಂಡರೆ ಅದು ಸಂವಿಧಾನ ವಿರೋಧಿಯಾಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಚರ್ಚ್ ಮೇಲೆ ಒಂದೇ ಒಂದು ದಾಳಿಯೂ ನಡೆಯದಂತೆ ನೋಡಿಕೊಂಡಿದ್ದೆ. ಆಗಲೂ ಇದ್ದ ಪೊಲೀಸರೇ ಈಗಲೂ ಇದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಆಡಳಿತ ನಡೆಸುವವರು ವಿವೇಚನೆಯಿಂದ ನಿರ್ಧರಿಸಬೇಕು’ ಎಂದರು.

ಯಾವುದೋ ಒಂದು ಧರ್ಮವನ್ನು ಆಧಾರವಾಗಿಟ್ಟುಕೊಂಡು ಸಂವಿಧಾನ ರಚನೆ ಮಾಡಿಲ್ಲ. ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಛೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಸಂಭ್ರಮಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಕಾನೂನು, ಕಾಯಿದೆ ತರುವುದು ಸಂವಿಧಾನಬಾಹಿರ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಪಕ್ಷ ಸದಾ ಕ್ರಿಶ್ಚಿಯನ್ ಸಮುದಾಯದ ಜೊತೆಗಿರುತ್ತದೆ. ಈ ಸಮುದಾಯದವರಿಗೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದು ಒತ್ತಿ ಹೇಳಿದ ಸಿದ್ದರಾಮಯ್ಯ,ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ನೀಡಲಾಗಿದೆ. ಸಂವಿಧಾನದಿಂದ ಒಳ್ಳೆಯದು ಆಗಬೇಕು ಎಂದಾದರೆ ಆಡಳಿತ ಒಳ್ಳೆಯವರ ಕೈಯ್ಯಲ್ಲೇ ಇರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಆದರೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೋಮು ಸೌಹಾರ್ದದ ರಾಜ್ಯದಲ್ಲಿ ಚರ್ಚ್‌ ಗಳ ಮೇಲೆ ದಾಳಿಯಾಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ ಎಂದು ಹೇಳಿದರು.

Latest Indian news

Popular Stories