ಕಲಬುರಗಿ: ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟ, 10 ಮಂದಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ

ಕಲಬುರಗಿ: ಹೋಟೆಲ್‌ವೊಂದರಲ್ಲಿ ಅಡುಗೆ ಸಿಲಿಂಡರ್‌ ಸ್ಫೋಟಗೊಂಡಿದ್ದು ಭಾರೀ ಅನಾಹುತ ಸಂಭವಿಸಿದೆ. 10 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಕಲಬುರಗಿಯ ಸಪ್ತಗಿರಿ ಆರೇಂಜ್ ಹೋಟೆಲ್‌ನಲ್ಲಿ ಸಂಭವಿಸಿದೆ.

ಬೆಳಿಗ್ಗೆ 6.15ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿತು. ಕೆಲ ಕಾರ್ಮಿಕರು ಹೊರಗಡೆ ಬಂದರು‌. ಉಳಿದವರು ಕಟ್ಟಡದ ಹಿಂಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸರಿಸಲು ಯತ್ನಿಸಿದಾಗ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿದೆ. ಇಬ್ಬರನ್ನು ಜಿಮ್ಸ್‌ನ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಉಳಿದವರನ್ನು ಜಿಮ್ಸ್ ಸಾಮಾನ್ಯ ವಾರ್ಡ್‌ಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಉಪಾಹಾರದ ಸಿದ್ಧತೆಯಲ್ಲಿದ್ದ ಕಾರ್ಮಿಕರು ಗಾಯಗೊಂಡಿದ್ದಾರೆ. ಗ್ರಾಹಕರು ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ‌. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ‌ ಬೆಂಕಿ ನಂದಿಸಿ, ಕಾರ್ಮಿಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಘಟನೆಯಲ್ಲಿ ಕಾರ್ಮಿಕರಾದ ರಾಕೇಶ್, ಶಂಕರ್, ಗುರುಮೂರ್ತಿ, ಪ್ರಶಾಂತ್, ಸತ್ಯವಾನ ಶರ್ಮ್, ಅಪ್ಪಾರಾಯ, ಮಲ್ಲಿನಾಥ್, ವಿಠಲ್, ಮಹೇಶ್ ಲಕ್ಷ್ಮಣ ಸೇರಿ 10 ಜನ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

Latest Indian news

Popular Stories